ಬೆಂಗಳೂರು, ನ.16- ಎಲ್ಲದಕ್ಕೂ ಕಾಂಗ್ರೆಸ್ ಎಂದು ಟೀಕೆ ಮಾಡುವುದನ್ನು ಬಿಟ್ಟು ಬಿಜೆಪಿಯವರು, ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುಮತಿ ಕೊಡಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡಿನ ಕಾಂಗ್ರೆಸ್ನವರು ಮಾತನಾಡಿರುವುದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಪ್ರತಿಯೊಂದು ಪಕ್ಷಕ್ಕೂ ಅವರ ರಾಜ್ಯದ ಹಿತಾಸಕ್ತಿ ರಕ್ಷಣೆ ಪ್ರಥಮ ಆದ್ಯತೆಯಾಗಿರುತ್ತದೆ ಎಂದರು.
ಈ ಹಿಂದೆ ಮಹದಾಯಿಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿರುವುದಾಗಿ ಹೇಳಿ ಸಿಹಿ ಹಂಚಿದ್ದರು. ಆದರೆ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಇನ್ನೂ ಸಿಕ್ಕಿಲ್ಲ ಎಂದು ಆಕ್ಷೇಪಿಸಿದರು.ಮೇಕೆದಾಟು ಯೋಜನೆಯ ವಿಷಯದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ ಸಲ್ಲಿಸಿದ ದಾಖಲೆಗಳು ಮತ್ತು ಮಂಡಿಸಿದ ವಾದವನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಒಂದು ವೇಳೆ ಅನುಮತಿ ನಿರಾಕರಿಸಿದ್ದರೆ, ಅಣೆಕಟ್ಟು ನಿರ್ಮಾಣಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಈಗ ವೈಜ್ಞಾನಿಕವಾಗಿ ಮತ್ತು ಕಾನೂನಾತಕವಾಗಿ ಅಣೆಕಟ್ಟೆ ನಿರ್ಮಿಸಬಹುದು ಎಂದು ಹೇಳಿದರು.
ಆದರೆ ಯೋಜನೆ ಆರಂಭಕ್ಕೂ ಮುನ್ನ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ನಿರಾಕ್ಷೇಪಣೆ ಅಗತ್ಯ ಇದೆ. ಬಿಜೆಪಿಯವರು ರಾಜಕೀಯಕ್ಕಾಗಿ ತಮಿಳುನಾಡಿನ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯನ್ನು ಬಳಸಿಕೊಳ್ಳುವ ಬದಲಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೇಳಿ ಯೋಜನೆಗೆ ಅನುಮತಿ ಕೊಡಿಸಲಿ ಎಂದರು.
ಎಲ್ಲದಕ್ಕೂ ಕಾಂಗ್ರೆಸ್… ಕಾಂಗ್ರೆಸ್… ಎಂದು ಟೀಕೆ ಮಾಡುತ್ತಿದ್ದರೆ, ಕೇಂದ್ರ ಸರ್ಕಾರದ ಜವಾಬ್ದಾರಿ ಏನು ಎಂಬ ಪ್ರಶ್ನೆ ಕಾಡುತ್ತದೆ. ಮೋದಿ ಇದ್ದರೆ ಯಾವುದೂ ಅಸಾಧ್ಯವಲ್ಲ, ಹರ್ಘರ್ ಮೋದಿ ಎಂಬೆಲ್ಲಾ ಹೇಳಲಾಗುತ್ತಿದೆ. ಇವುಗಳು ಕೇವಲ ಘೋಷಣೆಗಳು ಮಾತ್ರವೇ? ಕೆಲಸಗಳಲ್ಲಿ ಯಾವುದೂ ನಡೆಯುವುದಿಲ್ಲವೇ? ಎಂದು ಆಕ್ಷೇಪಿಸಿದರು. ತಮಿಳುನಾಡಿನ ವಿವಿಧ ಪಕ್ಷಗಳ ನಾಯಕರ ಹೇಳಿಕೆಗಳ ಬಗ್ಗೆ ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಯವರ ಜೊತೆ ಮಕ್ತ ಚರ್ಚೆಗೆ ಎರಡು ಬಾರಿ ಆಹ್ವಾನ ನೀಡಿದ್ದಾರೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ 13 ವರ್ಷದಿಂದಲೂ ಜನಪರವಾಗಿ ಯಾವ ಕೆಲಸಗನ್ನೂ ಮಾಡಿಲ್ಲ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಎಸ್ಐಆರ್ ಮೂಲಕ ಮತಗಳ್ಳತನ ಮಾಡುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಅವರಲ್ಲಿ ಕೀಳರಿಮೆ ಹೆಚ್ಚಾಗಿದೆ. ಆಂತರಿಕ ಅಭದ್ರತೆಯಿಂದಾಗಿ ವಿರೋಧ ಪಕ್ಷಗಳ ನಾಯಕರ ಫೋನ್ ಕದ್ದಾಲಿಕೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಅವರಷ್ಟೇ ಅಲ್ಲ, ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ಕಡೆಗಳಲ್ಲಿ ಫೋನ್ ಕದ್ದಾಲಿಕೆಯಾಗಿದೆ. ಬಿಜೆಪಿ ಮತ್ತು ಆರ್ಎಸ್ಎಸ್ನವರು ವೈಜ್ಞಾನಿಕವಾಗಿ ಯಾರೇ ಪ್ರಶ್ನೆ ಮಾಡಿದರೂ, ಅವರ ವಿರುದ್ಧ ಎಲ್ಲಾ ತಂತ್ರಗಾರಿಕೆಗಳನ್ನು ಬಳಸುತ್ತಾರೆ. ನನ್ನ ಫೋನ್ ಕೂಡ ಕದ್ದಾಲಿಕೆಯಾಗಿರಬಹುದು ಎಂದರು.
ರಾಮನಗರದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ಸ್ವಾಮಿ ಅವರಿಗೆ ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿರುವುದು ಸಣ್ಣ ಘಟನೆ. ಯಾರು ಬೀಗ ಹಾಕಿದ್ದರು, ಯಾವ ಕಾರಣಕ್ಕೆ ಎಂದು ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಒಂದು ವೇಳೆ ದೂರು-ಪ್ರತಿದೂರುಗಳು ಬಂದರೆ ಪ್ರಕರಣ ದಾಖಲಿಸಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದರು.
ದಲಿತರನ್ನು ದೇವಸ್ಥಾನದ ಒಳಗೆ ಬಿಡುವುದಿಲ್ಲ. ಅದರ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಒಬ್ಬ ವ್ಯಕ್ತಿಯನ್ನುಒಂದು ಗಂಟೆ ತಡೆಯಲಾಗಿತ್ತು ಎಂಬ ಕಾರಣಕ್ಕಾಗಿ ದೊಡ್ಡ ಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
