ಬೆಂಗಳೂರು, ನ.16- ಉಡುಪಿಗೆ ತೆರಳಿ ಸೀತಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ತುಮಕೂರು ಮೂಲದ ದಂಪತಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ.ತುಮಕೂರು ಜಿಲ್ಲೆಯವರಾದ ಶ್ರೀನಿವಾಸಮೂರ್ತಿ (52) ಹಾಗೂ ಗಂಗಾ (48) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಯಾವುದೋ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಉಡುಪಿಗೆ ತೆರಳಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಮಾಬುಕಳ ಸೇತುವೆ ಬಳಿ ಮೊನ್ನೆ ಇಬ್ಬರೂ ವೇಲ್ನಿಂದ ಕೈಗಳನ್ನು ಕಟ್ಟಿಕೊಂಡು ಒಟ್ಟಿಗೆ ಸೀತಾ ನದಿಗೆ ಹಾರಿದ್ದಾರೆ.ಅದೇ ಸಮಯದಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದ ಆಟೋ ಚಾಲಕರೊಬ್ಬರು ಘಟನೆಯನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯರೊಂದಿಗೆ ಶೋಧ ಕಾರ್ಯ ಕೈಗೊಂಡರಾದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ದಂಪತಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ತಜ್ಞರೊಂದಿಗೆ ಶೋಧ ಕಾರ್ಯ ಮುಂದುವರಿಸಲಾಗಿದ್ದು, ನಿನ್ನೆ ಬೆಳಿಗ್ಗೆ ದಂಪತಿಯ ಮೃತದೇಹಗಳು ಪತ್ತೆಯಾಗಿವೆ.ಆರಂಭದಲ್ಲಿ ಇವರ ಗುರುತು ಪತ್ತೆಯಾಗಿರಲಿಲ್ಲ. ಪೊಲೀಸರು ತನಿಖೆ ಕೈಗೊಂಡು ಅವರ ವಿಳಾಸವನ್ನು ಪತ್ತೆಹಚ್ಚಿದ್ದಾರೆ.
ಶ್ರೀನಿವಾಸಮೂರ್ತಿ ವೃತ್ತಿಯಲ್ಲಿ ಚಾಲಕರಾಗಿದ್ದು, ಅವರ ಪತ್ನಿ ಗಂಗಾ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದರು. ಇವರಿಬ್ಬರೂ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು, ಉಡುಪಿಗೆ ಏಕೆ ಬಂದಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ದಂಪತಿಯ ಮೃತದೇಹಗಳಿಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಉಡುಪಿಯ ಕೋಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
