Homeಅಂತಾರಾಷ್ಟ್ರೀಯಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಭೀಕರ ಅಗ್ನಿ ಅವಘಡ : 11 ಮಂದಿ ಸಾವು

ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಭೀಕರ ಅಗ್ನಿ ಅವಘಡ : 11 ಮಂದಿ ಸಾವು

ಫುಕೆಟ್‌, ನ.16- ಥೈಲ್ಯಾಂಡ್‌ನ ದಕ್ಷಿಣದ ರೆಸಾರ್ಟ್ ದ್ವೀಪವಾದ ಫುಕೆಟ್‌ನಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 11 ಜನರು ಸಾವನ್ನಪ್ಪಿದ್ದು, ಇತರ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಾಹನ ಬಾಡಿಗೆ ವ್ಯವಹಾರ ನಡೆಸುತ್ತಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಹತ್ತಿರದ ಹಲವಾರು ಕಟ್ಟಡಗಳಿಗೆ ಹರಡಿದೆ.

ಬೆಳಗಿನ ಜಾವ 3.17ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುಮಾರು ಎರಡು ಗಂಟೆಗಳು ಬೇಕಾಯಿತು ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ 15 ಮಂದಿ ಥಾಯ್ ಪ್ರಜೆಗಳು ಮತ್ತು ಒಬ್ಬರು ಮ್ಯಾನ್ಮಾರ್ ಪ್ರಜೆಯಾಗಿದ್ದಾರೆ. ಸಾವನ್ನಪ್ಪಿದವರಲ್ಲಿ ಅಥವಾ ಗಾಯಗೊಂಡವರಲ್ಲಿ ಯಾವುದೇ ಪ್ರವಾಸಿಗರು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಈ ಕಟ್ಟಡವು ಫುಕೆಟ್‌ನ ಪಶ್ಚಿಮ ಕರಾವಳಿಯಲ್ಲಿರುವ ಜನಪ್ರಿಯ ಪಟಾಂಗ್ ಬೀಚ್ ಸಮೀಪದ ಪಟ್ಟಣ ಪ್ರದೇಶದಲ್ಲಿದೆ. ಬ್ಯಾಂಕಾಕ್‌ನ ಬಾರ್‌ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ ನಾಲ್ಕು ತಿಂಗಳ ಬಳಿಕ ಮತ್ತೊಂದು ಭೀಕರ ಬೆಂಕಿ ಅವಘಡ ಸಂಭವಿಸಿದೆ.

RELATED ARTICLES

Latest News