ಬೆಂಗಳೂರು,ನ.16- ಟೀ, ಕಾಫಿ ಹಾಗೂ ಸಿಗರೇಟ್ ಮಾರಾಟ ಮಾಡುವ ಅಂಗಡಿ ಮಾಲಿಕರುಗಳೇ ಇರಲಿ ಎಚ್ಚರ..! ಇನ್ನು ಮುಂದೆ ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಇಲ್ಲವೇ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಣೆ ಮಾಡದಿದ್ದರೆ ಬೀಳಲಿದೆ ದಂಡ.ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ನಗರ ಪಾಲಿಕೆಗಳು ಈ ರೀತಿಯ ದಂಡದ ಬಿಸಿ ಮುಟ್ಟಿಸಲು ಮುಂದಾಗಿವೆ.
ಕೇಂದ್ರ ನಗರ ಪಾಲಿಕೆಯ ಶಾಂತಲಾ ನಗರದಲ್ಲಿ ಟೀ ಅಂಗಡಿ ಮಾಲೀಕರೊಬ್ಬರಿಗೆ ದಂಡ ವಿಧಿಸಲಾಗಿದೆ. ಅಂಗಡಿಯ ಬಳಿ ಪಾದಚಾರಿ ಮಾರ್ಗದಲ್ಲಿ ಸಿಗರೇಟ್ ತುಂಡುಗಳು ಬಿದ್ದಿರುವುದು ಹಾಗೂ ತ್ಯಾಜ್ಯ ವಿಂಗಡಣೆ ಮಾಡದಿರುವುದನ್ನು ಗಮನಿಸಿದ ಅಧಿಕಾರಿಗಳು, ಎರಡು ಪ್ರತ್ಯೇಕ ಉಲ್ಲಂಘನೆಗಳಿಗೆ ತಲಾ 1,000ಗಳಂತೆ ಒಟ್ಟು 2,000 ದಂಡ ವಿಧಿಸಿದ್ದಾರೆ.
ಅಂಗಡಿಯ ಮುಂದೆ ಸಿಗರೇಟ್ ತುಂಡುಗಳಿದ್ದರೆ ದಂಡ! ನಗರದ ಟೀ ಮತ್ತು ಕಾಫಿ ಅಂಗಡಿಗಳಲ್ಲಿ ಗ್ರಾಹಕರು ಪಾನೀಯ ಸೇವಿಸಿದ ಬಳಿಕ ಸಿಗರೇಟ್ ಸೇದಿ ಅದರ ತುಂಡುಗಳನ್ನು ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಮೇಲೆ ಎಸೆಯುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಹಾಳಾಗುತ್ತಿದ್ದು, ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗಡಿಯ ಸುತ್ತಮುತ್ತ ಸ್ವಚ್ಛತೆ ಕಾಪಾಡದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ದಂಡ ವಿಧಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಒಮ್ಮೆ ದಂಡ ಪಾವತಿಸಿ ಸುಮ್ಮನಾದರೆ ಸಾಲದು. ಇದೇ ರೀತಿಯ ಉಲ್ಲಂಘನೆಗಳನ್ನು ಪದೇಪದೇ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಅಗತ್ಯ ನಿಯಮಗಳಡಿ ವ್ಯಾಪಾರ ಮುಂದುವರಿಸುವುದಕ್ಕೂ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಅಂಗಡಿ ಮಾಲೀಕರು ಮುನ್ನೆಚ್ಚರಿಕೆ ವಹಿಸಬೇಕಿದೆ. ಸಣ್ಣಪುಟ್ಟ ಟೀ, ಕಾಫಿ ಹಾಗೂ ಸಿಗರೇಟ್ ಅಂಗಡಿ ಮಾಲೀಕರು ತಮ್ಮ ಅಂಗಡಿಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಗ್ರಾಹಕರು ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ನೋಡಿಕೊಳ್ಳಬೇಕು.
ತ್ಯಾಜ್ಯವನ್ನು ಹಸಿ ಮತ್ತು ಒಣ ಕಸ ಎಂದು ವಿಂಗಡಿಸಿ ವಿಲೇವಾರಿ ಮಾಡಬೇಕು.ನಗರದ ಸ್ವಚ್ಛತೆ ಕಾಪಾಡುವುದು ಕೇವಲ ಜಿಬಿಎ ಅಧಿಕಾರಿಗಳ ಜವಾಬ್ದಾರಿಯಲ್ಲ; ವ್ಯಾಪಾರಿ ಗಳು ಮತ್ತು ಸಾರ್ವಜನಿಕರ ಸಹಕಾರವೂ ಅಗತ್ಯ. ಇಲ್ಲವಾದರೆ ದಂಡದ ಹೊರೆ ಮಾತ್ರವಲ್ಲದೆ, ವ್ಯಾಪಾರಕ್ಕೂ ಸಂಕಷ್ಟ ಎದುರಾಗಬಹುದು ಇರಲಿ ಎಚ್ಚರ.
