ಬೆಂಗಳೂರು, ನ.16 -ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಮೇಲನೆಗೆ ಚುನಾಯಿತರಾಗಿದ್ದ ಎ.ಪಿ.ರಂಗನಾಥ, ಕೆ.ಎಂ.ಸುರೇಶ, ಎಸ್.ವಿ.ಸಂಕನೂರ ಮತ್ತು ಶಶಿಲ್ ಜಿ. ನಮೋಶಿ ಅವರು ವಿಧಾನ ಪರಿಷತ್ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಕಾಸಸೌಧದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಧಾನ ಪರಿಷತ್ನ ಸಭಾಪತಿ ಸಲೀಂ ಅಹದ್ ಅವರು ನೂತನ ಸದಸ್ಯರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಉಪ ಸಭಾಪತಿ ಉಮಾಶ್ರೀ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಮೇಲನೆ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಪರಿಷತ್ ಸದಸ್ಯರಾದ ಟಿ.ಎ. ಶರವಣ, ಪರಿಷತ್ತಿನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹಾಗೂ ಸದಸ್ಯರ ಕುಟುಂಬ ವರ್ಗ ಮತ್ತಿತರರು ಉಪಸ್ಥಿತರಿದ್ದು, ಅಭಿನಂದಿಸಿದರು.
ವಿಧಾನ ಪರಿಷತ್ತಿನ ದ್ವೈ ವಾರ್ಷಿಕ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಪಿ.ರಂಗನಾಥ, ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಂ.ಸುರೇಶ, ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ವಿ.ಸಂಕನೂರ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಶಿಲ್ ಜಿ. ನಮೋಶಿ ಅವರು ಮೇಲನೆಯ ನೂತನ ಸದಸ್ಯರಾಗಿ ಚುನಾಯಿತರಾಗಿದ್ದರು.
ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ಚಿದಾನಂದ್ ಎಂ.ಗೌಡ, ಎಸ್.ವಿ.ಸಂಕನೂರ, ಶಶಿಲ್ ಜಿ. ನಮೋಶಿ ಹಾಗೂ ಮಾಜಿ ಉಪ ಸಭಾಪತಿ ಪುಟ್ಟಣ್ಣ ಅವರು ನ.11ರಂದು ನಿವೃತ್ತರಾಗಿದ್ದಾರೆ. ಆದರೆ, ಎಸ್.ವಿ.ಸಂಕನೂರ, ಶಶಿಲ್ ಜಿ. ನಮೋಶಿ ಅವರು ಮರು ಆಯ್ಕೆಯಾಗಿದ್ದಾರೆ. ಚಿದಾನಂದ್ ಎಂ.ಗೌಡ ಅವರು ಮರು ಸ್ಪರ್ಧೆ ಮಾಡಿರಲಿಲ್ಲ. ಪುಟ್ಟಣ್ಣ ಅವರು ಮರು ಆಯ್ಕೆ ಬಯಸಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ.
