ಕೊಲ್ಲೂರು,ನ.16- ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎನ್ಡಿಎ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲಗಳಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ, ಜೆಡಿಎಸ್ ನಡುವೆ ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲಗಳಿಲ್ಲ. ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಅಪೇಕ್ಷೆ ಇದೆ. ಜೆಡಿಎಸ್ ಕಾರ್ಯಕರ್ತರು, ಮುಖಂಡರಿಂದಲೂ ಅಭ್ಯರ್ಥಿ ಕಣಕ್ಕಿಳಿಸ ಬೇಕು ಎಂಬ ಒತ್ತಾಯವಿದೆ ಎಂದರು.
ಹಿರಿಯೂರು ಕ್ಷೇತ್ರ ಸ್ವಾತಂತ್ರ್ಯಾ ನಂತರ ಜನತಾದಳ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇರುವಂತಹ ಕ್ಷೇತ್ರ. 2013ಕ್ಕಿಂತಲೂ ಮುಂಚೆ ಆ ಕ್ಷೇತ್ರದಲ್ಲಿ ಬಿಜೆಪಿಯ ಶಕ್ತಿ ಇರಲಿಲ್ಲ. ಕ್ಷೇತ್ರದಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಬೇಕು. ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು ಎಂದರು.
ಮಾಹಿತಿಗಳಿವೆ : ಬೆಂಗಳೂರು ಸುತ್ತಮುತ್ತ ಭೂ ವ್ಯವಹಾರ ಇಟ್ಟುಕೊಂಡಿರುವವರು ದಕ್ಷಿಣ ಕನ್ನಡ ಜಿಲ್ಲೆಗೆ ಅದೇ ವ್ಯವಹಾರವನ್ನು ವಿಸ್ತರಿಸಲು ಬಂದಿದ್ದಾರೆ. ಅದರ ಬಗ್ಗೆ ಮಾಹಿತಿಗಳಿವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
32 ಸಾವಿರ ಕೋಟಿ ರೂ. ಯೋಜನೆಗಳನ್ನು ಘೋಷಣೆ ಮಾಡಿರುವುದು ಮಂಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅಭಿವೃದ್ಧಿಗಾಗಿ ಅಲ್ಲ, ಬೇರೆ ಉದ್ದೇಶದ ಆಸಕ್ತಿ ಬಂದಿದೆ ಎಂದು ರಾಜ್ಯಸರ್ಕಾರವನ್ನು ಟೀಕಿಸಿದರು.32 ಸಾವಿರ ಕೋಟಿ ರೂ. ಯೋಜನೆ ಘೋಷಣೆ ಮಾಡಿದ್ದಾರೆ. ಕನಿಷ್ಠ 2 ರಿಂದ 3 ಸಾವಿರ ಕೋಟಿ ರೂಪಾಯಿಯಾದರೂ ಕರಾವಳಿ ಭಾಗಕ್ಕೆ ಬಿಡುಗಡೆ ಮಾಡಿ ಎಂದು ವ್ಯಂಗ್ಯವಾಡಿದರು.
ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ದರ ನೀಡಿ ಬಸ್ ಪ್ರಯಾಣದರವನ್ನು ದುಬಾರಿ ಮಾಡಿದ್ದಾರೆ. ಯಾತ್ರಾ ಸ್ಥಳಗಳಿಗೆ ಭಕ್ತರ ಸಂಖ್ಯೆ ಅಧಿಕವಾದಂತೆಲ್ಲಾ ಕೋಟಿ ಕೋಟಿ ಹಣ ಸಂಗ್ರಹವಾಗುತ್ತಿದೆ. ಇದಕ್ಕೆ ಹಾಸನಾಂಬೆ ದರ್ಶನಕ್ಕೆ ಬಂದ ಜನರು ನೀಡಿರುವ ಹಣವೇ ಸಾಕ್ಷಿ ಎಂದರು.
ಪೆಟ್ರೋಲ್ ಜೊತೆ ಅಧಿಕ ಪ್ರಮಾಣದ ಎಥೆನಾಲ್ ಮಿಶ್ರಣವಾಗುತ್ತಿದೆ ಎಂಬ ಸಚಿವ ರಿಜ್ವಾನ್ ಅರ್ಷದ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ ಅಧಿಕಾರದ ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ. ಪೆಟ್ರೋಲ್ ಬಂಕ್ನಲ್ಲಿ ಕಲಬೆರಕೆ ಆಗುವುದು ಬೇರೆ. ಆದರೆ ಟರ್ಮಿನಲ್ನಲ್ಲೇ ಎಥೆನಾಲ್ ಮಿಶ್ರಣವಾಗುವುದು. ಇದು ಆಟೋಮ್ಯಾಟಿಕ್ ಪ್ರಕ್ರಿಯೆ ಎಂದು ಹೇಳುತ್ತಾರೆ. ಸಾಮಾನ್ಯ ಜನರಿಗೆ ತೊಂದರೆ ಆಗಬಾರದು ಎಂದು ಹೇಳಿದರು.
ರಾಜ್ಯಸರ್ಕಾರ ಶೇ.30 ರಷ್ಟು ಎಥೆನಾಲ್ ಪೆಟ್ರೋಲ್ ಜೊತೆ ಮಿಶ್ರಣವಾಗಿದೆ ಎಂದು ಆರೋಪಿಸಿದ್ದಾರೆ. ಪೆಟ್ರೋಲ್ ಬಂಕ್ನವರಿಗೂ ತೊಂದರೆ ಇದೆ. ನಾಳೆ ಇದರ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು. ಈ ವಿಚಾರವು ತಾರ್ಕಿಕ ಹಂತಕ್ಕೆ ಬರುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
