ಬೆಂಗಳೂರು, ನ.16- ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.ತಮ 29 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಇಳಿದಿರುವ ನೌಕರರು, ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಟೌನ್ಹಾಲ್ನಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಐದು ನಗರ ಪಾಲಿಕೆಗಳ ನೌಕರರು ಸಾಮೂಹಿಕ ರಜೆ ಹಾಕಿ ಸಭೆಯಲ್ಲಿ ಪಾಲ್ಗೊಂಡಿದರು. ನೌಕರರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ಸಂಘ ನೀಡಿದೆ.
ಜಿಬಿಎ ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರಿಗೆ ಮುಂಬಡ್ತಿ, ಖಾಲಿ ಹುದ್ದೆಗಳ ಭರ್ತಿ, ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಾವಳಿ ಜಾರಿ, ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರದ ಅಧಿಕಾರ ಹಂಚಿಕೆ ಸೇರಿದಂತೆ ಹಲವು ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಜಿಬಿಎ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಆಗ್ರಹಿಸಿದ್ದಾರೆ.
ಜಿಬಿಎ ಮುಖ್ಯ ಆಯುಕ್ತರ ಆಡಳಿತ ಶಾಖೆಗೆ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಾವಳಿ (ಸಿಆರ್ಆರ್) ರೂಪಿಸಿ ಜಾರಿಗೊಳಿಸಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ. ಇದರಿಂದ ಸಿಬ್ಬಂದಿಯ ನೇಮಕಾತಿ, ಮುಂಬಡ್ತಿ ಹಾಗೂ ಇತರ ಆಡಳಿತಾತ್ಮಕ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಅನುಕೂಲವಾಗಲಿದೆ ಎಂಬುದು ಸಂಘದ ವಾದ.
1976ರ ವೃಂದ ಮತ್ತು ನೇಮಕಾತಿ ನಿಯಮಾವಳಿಯಡಿ ಎ ಶ್ರೇಣಿಯ ಅಧಿಕಾರಿಗಳ ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರಕ್ಕೆ ಸಂಬಂಧಿಸಿದ ಅಧಿಕಾರಗಳನ್ನು ಜಿಬಿಎ ಮುಖ್ಯ ಆಯುಕ್ತರಿಗೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಜತೆಗೆ ಐದು ನಗರ ಪಾಲಿಕೆಗಳ ಎ ಬಿ ಸಿ ಮತ್ತು ಡಿ ವೃಂದದ ಅಧಿಕಾರಿ ಹಾಗೂ ನೌಕರರ ನೇಮಕಾತಿ, ಮುಂಬಡ್ತಿ, ವರ್ಗಾವಣೆ ಮತ್ತು ಸಾಮಾನ್ಯ ಜೇಷ್ಠತಾ ಪಟ್ಟಿ ನಿರ್ವಹಣೆ ಸೇರಿದಂತೆ ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನೂ ಮುಖ್ಯ ಆಯುಕ್ತರಿಗೆ ವಹಿಸಬೇಕು ಎಂದು ಆಗ್ರಹಿಸಲಾಗಿದೆ.
3,800ಕ್ಕೂ ಹೆಚ್ಚು ಹುದ್ದೆಗಳು ಖಾಲಿ:ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಸುಮಾರು 3,800ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಕೆಲವು ಅಂದಾಜುಗಳ ಪ್ರಕಾರ ಖಾಲಿ ಹುದ್ದೆಗಳ ಸಂಖ್ಯೆ 4,000ಕ್ಕೂ ಅಧಿಕವಾಗಿದ್ದು, ಅಗತ್ಯ ಸಿಬ್ಬಂದಿ ಇಲ್ಲದೆ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ 2025ರ ಸೆಪ್ಟೆಂಬರ್ 1ರ ಆದೇಶದಂತೆ ಮಂಜೂರಾಗಿರುವ ಹುದ್ದೆಗಳ ಪೈಕಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ ಸಾರ್ವಜನಿಕ ಸೇವೆಗಳಿಗೆ ತೊಂದರೆಯಾಗದಂತೆ ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂಬುದು ನೌಕರರ ಆಗ್ರಹವಾಗಿದೆ.
ನಾಗರಿಕ ಸೇವೆಗಳಿಗೆ ಹೊಡೆತ ಬೀಳುವ ಆತಂಕ:ಐದು ನಗರ ಪಾಲಿಕೆಗಳ ನೌಕರರ ಸಾಮೂಹಿಕ ರಜೆಯಿಂದ ನಾಗರಿಕ ಸೇವೆಗಳ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಇ-ಖಾತಾ ವಿಲೇವಾರಿ, ಆಸ್ತಿ ತೆರಿಗೆ ಸಂಬಂಧಿತ ಕೆಲಸಗಳು, ಕಟ್ಟಡ ಪರವಾನಗಿ, ಕಂದಾಯ ವಿಭಾಗದ ಸೇವೆಗಳು ಹಾಗೂ ಎಂಜಿನಿಯರಿಂಗ್ ವಿಭಾಗದ ದೈನಂದಿನ ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.
ರಸ್ತೆ ಗುಂಡಿಗಳ ದುರಸ್ತಿ, ಫುಟ್ಪಾತ್ ಸಮಸ್ಯೆಗಳು, ಅಕ್ರಮ ಕಟ್ಟಡಗಳ ಕುರಿತ ದೂರುಗಳ ವಿಲೇವಾರಿ ಮತ್ತು ಆರೋಗ್ಯ ವಿಭಾಗದ ಕಾರ್ಯಗಳ ಮೇಲೂ ಪರಿಣಾಮ ಬೀರುವ ಆತಂಕವಿದೆ. ಈಗಾಗಲೇ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ನಗರ ಪಾಲಿಕೆಗಳಲ್ಲಿ ಸಾಮೂಹಿಕ ರಜೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ.
