Homeರಾಜ್ಯಪತ್ರಕರ್ತರ ಪ್ರವಾಸ ಬ್ಯಾನರ್‌ ಹಾಕಿಕೊಂಡು ಶವಗಳನ್ನು ಸಾಗಿಸಿದ್ದ ನರಹಂತಕ ಇಂದುಶೇಖರ್‌

ಪತ್ರಕರ್ತರ ಪ್ರವಾಸ ಬ್ಯಾನರ್‌ ಹಾಕಿಕೊಂಡು ಶವಗಳನ್ನು ಸಾಗಿಸಿದ್ದ ನರಹಂತಕ ಇಂದುಶೇಖರ್‌

ಬೆಂಗಳೂರು,ನ.16- ರಾಜ್ಯದ ಜನರೇ ಬೆಂಗಳೂರಿನತ್ತ ತಿರುಗಿ ನೋಡುವ ಹಾಗೆ ಕುಟುಂಬದ ಏಳು ಮಂದಿಯನ್ನು ಮನೆಯಲ್ಲಿಯೇ ಭೀಕರವಾಗಿ ಕೊಲೆ ಮಾಡಿ ಶವಗಳನ್ನು ಸಾಗಿಸಲು ಯಾರಿಗೂ ಅನುಮಾನ ಬಾರದಂತೆ ಆರೋಪಿ ಪತ್ರಿಕೋದ್ಯಮದ ಹೆಸರು ದುರ್ಬಳಕೆ ಮಾಡಿಕೊಂಡಿರುವುದು ಪೊಲೀಸರ ಇದುವರೆಗಿನ ತನಿಖೆಯಿಂದ ಬೆಳಕಿಗೆ ಬಂದಿದೆ.

ಆರೋಪಿ ಇಂದುಶೇಖರ್‌ ಆಸ್ತಿ ಕಬಳಸಿಲು ಹಾಗೂ ದ್ವೇಷದಿಂದ ಪತ್ನಿ ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಒಬ್ಬೊಬ್ಬರಂತೆ ಕೊಲೆ ಮಾಡಿದ ನಂತರ ಆಗಿಂದಾಗ್ಗೆ ಶವ ಸಾಗಿಸಲು ಬಳಸಿದ್ದ ಕಾರಿಗೆ ಪ್ರೆಸ್‌‍ ಎಂಬ ಸ್ಟಿಕ್ಕರ್‌ ಹಾಕಿಕೊಂಡಿದ್ದನು.ಇದರ ಜೊತೆಗೆ ತನ್ನ ಕಾರಿನ ಮುಂದೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪತ್ರಕರ್ತರ ಪ್ರವಾಸ ಎಂಬ ಬ್ಯಾನರ್‌ ಮಾಡಿಸಿಕೊಂಡು ವ್ಯವಸ್ಥಿತ ಸಂಚಿನಂತೆ ತನ್ನ ಕಾರಿನ ಮುಂಭಾಗ ನಂಬರ್‌ಪ್ಲೇಟ್‌ ಕಾಣದಂತೆ ಆರೋಪಿ ಅಳವಡಿಸಿಕೊಂಡಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಚೆಕ್‌ಪೋಸ್ಟ್‌ ಮಾರ್ಗದಲ್ಲಿ ಸಾಗುವಾಗ ಪೊಲೀಸರು ಕಾರನ್ನು ಪರಿಶೀಲಿಸುವುದನ್ನು ತಡೆಯುವ ಉದ್ದೇಶದಿಂದ ಆರೋಪಿ ಈ ಪ್ಲ್ಯಾನ್‌ ಮಾಡಿಕೊಂಡಿದ್ದರಿಂದ ಪೊಲೀಸರಿಗೆ ಯಾವುದೇ ಶಂಕೆ ವ್ಯಕ್ತವಾಗಿಲ್ಲ.ಒಂದು ವೇಳೆ ಶವ ಸಾಗಿಸುವಾಗ ಮಾರ್ಗಮಧ್ಯೆ ಯಾರಾದರೂ ಕಾರನ್ನು ತಡೆದರೆ ತನ್ನ ಬಳಿಯಿದ್ದ ಠಾಣಾ ವರದಿ ಎಂಬ ಪತ್ರಿಕೆ ಮತ್ತು ವಿಸಿಟಿಂಗ್‌ ಕಾರ್ಡ್‌ ತೋರಿಸುತ್ತಿದ್ದನು ಎಂಬುದು ತಿಳಿದುಬಂದಿದೆ.

ಆರೋಪಿ ಬಾಡೂಟದ ನೆಪದಲ್ಲಿ ಮಗಳ ಮೂಲಕ ಪತ್ನಿ ಕುಟುಂಬದವರನ್ನು ಆಗಾಗ್ಗೆ ಮನೆಗೆ ಕರೆಸಿಕೊಂಡು ಒಬ್ಬೊಬ್ಬರನ್ನು ಕೊಲೆ ಮಾಡಿದ ನಂತರ ಬಾತ್‌ರೂಂಗೆ ಶವ ಎಳೆದೊಯ್ದು ಹಾಕುತ್ತಿದ್ದನು. ರಕ್ತ ಪೂರ್ತಿ ಸೋರಿಕೆಯಾದ ನಂತರ ಮೃತದೇಹದ ಮೇಲೆ ವಾಸನೆ ಬಾರದಂತೆ ರಾಸಾಯನಿಕವನ್ನು ಸಿಂಪಡಿಸುತ್ತಿದ್ದನು.

ನಂತರ ನಾಲ್ಕೈದು ಗೋಣಿಚೀಲಗಳನ್ನು ಜೊತೆ ಗೂಡಿಸಿ ಅದರೊಳಗೆ ಶವವನ್ನು ಬಿಗಿಯಾಗಿ ಕಟ್ಟಿ ಹಾಕಿ ಅದರ ಮೇಲೂ ರಾಸಾಯನಿಕ ಸಿಂಪಡಿಸಿ ನಂತರ ತನ್ನ ಕಾರಿನಲ್ಲಿ ಹಾಕಿಕೊಂಡು ಪ್ರಯಾಣ ಬೆಳೆಸುತ್ತಿದ್ದನು. ಪ್ರತೀ ಬಾರಿಯೂ ಹೀಗೇ ಮಾಡುತ್ತಿದ್ದನು.ಬಾಲಕನ ಶವವನ್ನು ನಂದಿಬೆಟ್ಟದ ಅರಣ್ಯಪ್ರದೇಶ ಹಾಗೂ ಇನ್ನುಳಿದವರ ಶವಗಳನ್ನು ಚಾಮುಂಡಿ ಬೆಟ್ಟದ ಅರಣ್ಯಪ್ರದೇಶ, ಶಿರಾಡಿ ಘಾಟ್‌, ತಮಿಳುನಾಡಿನ ಸೇಲಂನ ಅರಣ್ಯಪ್ರದೇಶ ಹೀಗೆ ಒಂದೊಂದು ಕಡೆ ಎಸೆದು ವಾಪಸ್ಸಾಗುತ್ತಿದ್ದನು.

ಆರೋಪಿ ತಂದೆಯ ಮಾಸ್ಟರ್‌ ಪ್ಲ್ಯಾನ್‌ಗೆ ಮಗಳು ಸಾಥ್‌ ಕೊಟ್ಟಿದ್ದು ದುರಂತ. ಒಟ್ಟಾರೆ ಈ ಪ್ರಕರಣದ ಇಂಚಿಂಚೂ ಮಾಹಿತಿಗಳನ್ನು ಉತ್ತರ ವಿಭಾಗದ ಪೊಲೀಸರು ಆರೋಪಿಯಿಂದ ಬಾಯ್ಬಿಡಿಸುತ್ತಿದ್ದು, ಈತನ ಹೇಳಿಕೆಗಳಿಂದ ಒಂದು ಕ್ಷಣ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

RELATED ARTICLES

Latest News