ಬೆಂಗಳೂರು,ನ.16- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ರಾತ್ರಿ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದುರ್ಗಮ (38) ಪತಿಯಿಂದಲೇ ಭೀಕರವಾಗಿ ಕೊಲೆಯಾದ ನತದೃಷ್ಟೆ. ಇವರು ರಾಯಚೂರಿನ ಮಾನ್ವಿ ತಾಲ್ಲೂಕಿನ ನಿವಾಸಿ.
ಸುಮಾರು 19 ವರ್ಷದ ಹಿಂದೆ ದುರ್ಗಮ ಮತ್ತು ಆರೋಪಿ ಬಸವರಾಜ್ ವಿವಾಹವಾಗಿದ್ದು, ಎರಡು ಮಕ್ಕಳಿವೆ.ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಕೊಳತೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ದುರ್ಗಮ ಹೌಸಿಂಗ್ ಕೀಪಿಂಗ್ ಕೆಲಸ ಮಾಡುತ್ತಿದ್ದರು.
ಒಬ್ಬ ಮಗ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬ ಕೆಲಸಕ್ಕೆ ಹೋಗುತ್ತಿದ್ದಾನೆ. ಪತಿ-ಪತ್ನಿ ಮಧ್ಯೆ ಆಗಾಗ್ಗೆ ಕೌಟುಂಬಿಕ ವಿಚಾರದಲ್ಲಿ ಜಗಳ ನಡೆಯುತ್ತಿತ್ತು.ರಾತ್ರಿ 12.30ರ ಸಮಯದಲ್ಲಿ ಇದೇ ರೀತಿ ಜಗಳ ಉಂಟಾಗಿ ಆರೋಪಿ ಬಸವರಾಜ್ ಕೊಡಲಿಯಿಂದ ದುರ್ಗಮ ಅವರ ತಲೆ ಹಾಗೂ ಮುಂತಾದ ಭಾಗಗಳಿಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಒಬ್ಬ ಮಗ ತನ್ನ ಸೋದರ ಮಾವ ಯಮನಪ್ಪ ಅವರಿಗೆ ವಿಷಯ ತಿಳಿಸಿದ್ದಾನೆ. ಮತ್ತೊಬ್ಬ ಮಗ ಸಂಬಂಧಿಕರ ಮನೆಗೆ ಹೋಗಿದ್ದ.
ನನ್ನ ಅಕ್ಕನನ್ನು ಮಾವ ಬಸವರಾಜ್ ಕೊಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಯಮನಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸುದ್ದಿ ತಿಳಿದ ಮಾರತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
