Homeರಾಷ್ಟ್ರೀಯಉತ್ತರಾಖಂಡದಲ್ಲಿ ಎರಡು ಭೀಕರ ಅಪಘಾತ : 12 ಮಂದಿ ಸಾವು, 32 ಜನರಿಗೆ ಗಾಯ

ಉತ್ತರಾಖಂಡದಲ್ಲಿ ಎರಡು ಭೀಕರ ಅಪಘಾತ : 12 ಮಂದಿ ಸಾವು, 32 ಜನರಿಗೆ ಗಾಯ

ಋಷಿಕೇಶ, ನ.17- ಉತ್ತರಾಖಂಡದ ಋಷಿಕೇಶ-ಬದರಿನಾಥ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ.

ಹರಿದ್ವಾರದಿಂದ ಕರ್ಣಪ್ರಯಾಗಕ್ಕೆ ಪ್ರಯಾಣಿಸುತ್ತಿದ್ದ ವಿಶ್ವನಾಥ್‌ ಸೇವಾ ಸಂಸ್ಥೆಯ ಬಸ್‌ ಬೆಳಗಿನ ಜಾವ ಸುಮಾರು 3.30ಕ್ಕೆ ಹರಿದ್ವಾರದಿಂದ ಹೊರಟಿತ್ತು. ಸುಮಾರು ಒಂದು ಗಂಟೆಯ ಪ್ರಯಾಣದ ಬಳಿಕ ಬಸ್‌ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಉರುಳಿ ಆಳವಾದ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ ಏಳು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡು ಋಷಿಕೇಶದ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.

ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಬ್ಯಾಸಿ ಮತ್ತು ಧಲ್ವಾಲಾದಲ್ಲಿ ನಿಯೋಜಿಸಲಾಗಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು. ಪೊಲೀಸ್‌ ಸಿಬ್ಬಂದಿಯೂ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು. ಘಟನೆಯ ಗಂಭೀರತೆಯನ್ನು ಗಮನಿಸಿ ಹೆಚ್ಚುವರಿ ಎಸ್‌ಡಿಆರ್‌ಎಫ್‌ ತಂಡಗಳನ್ನು ಕೂಡ ಸ್ಥಳಕ್ಕೆ ಕಳುಹಿಸಲಾಯಿತು.

ಬಸ್‌ನಲ್ಲಿದ್ದ 26 ಗಾಯಾಳುಗಳನ್ನು ರಕ್ಷಿಸಿ ಋಷಿಕೇಶದ ವಿವಿಧ ಆಸ್ಪತ್ರೆಗಳು ಹಾಗೂ ಏಮ್ಸ್‌ಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಜಾರ್ಖಂಡ್‌, ಬಿಹಾರ, ಉತ್ತರಾಖಂಡ, ಅಸ್ಸಾಂ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದ ಪ್ರಯಾಣಿಕರು ಇದ್ದಾರೆ. ಗಾಯಾಳುಗಳ ಪಟ್ಟಿಯಲ್ಲಿ ಗುವಾಹಟಿಯ ಮೂರು ವರ್ಷದ ಬಾಲಕಿ ಹಾಗೂ ಹಲ್ದ್ವಾನಿಯ 64 ವರ್ಷದ ಮಹಿಳೆಯೂ ಸೇರಿದ್ದಾರೆ. ಗುರುತು ಪತ್ತೆಯಾಗದ ಒಬ್ಬ ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ.

ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಬ್ರಿಜೇಶ್‌ ಭಟ್‌ ಅವರು ಅಪಘಾತವನ್ನು ದೃಢಪಡಿಸಿದ್ದಾರೆ.

ರುದ್ರಪ್ರಯಾಗದಲ್ಲೂ ಭೀಕರ ಅಪಘಾತ

ನಿನ್ನೆ ಸಂಜೆಯೂ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ರುದ್ರಪ್ರಯಾಗ ಜಿಲ್ಲೆಯ ಬನ್ಸ್ವಾರಾ-ಕಂದಾರ ಮೋಟಾರ್‌ ರಸ್ತೆಯಲ್ಲಿ ಮದುವೆ ಸಮಾರಂಭದಿಂದ ಗ್ರಾಮಕ್ಕೆ ಹಿಂದಿರುಗುತ್ತಿದ್ದ 10 ಮಂದಿ ಪ್ರಯಾಣಿಸುತ್ತಿದ್ದ ಬೊಲೆರೊ ವಾಹನ ಸುಮಾರು 500 ಮೀಟರ್‌ ಆಳದ ಕಂದಕಕ್ಕೆ ಉರುಳಿದೆ. ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ವಾಹನ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಸುದ್ದಿ ತಿಳಿದ ತಕ್ಷಣ ಡಿಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಹಾಗೂ ಪೊಲೀಸ್‌ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಕತ್ತಲೆ ಮತ್ತು ಕಡಿದಾದ ಬಂಡೆಗಳಿಂದ ಕೂಡಿದ ಭೂಪ್ರದೇಶದಿಂದಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಎದುರಾದರೂ, ಸಿಬ್ಬಂದಿ ಸ್ಟ್ರೆಚರ್‌ಗಳ ಮೂಲಕ ಆರು ಗಾಯಾಳುಗಳನ್ನು ಕಂದಕದಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒಂದೇ ದಿನದ ಅಂತರದಲ್ಲಿ ಉತ್ತರಾಖಂಡದ ಪರ್ವತ ಪ್ರದೇಶಗಳಲ್ಲಿ ಸಂಭವಿಸಿದ ಈ ಎರಡು ಅಪಘಾತಗಳು ರಸ್ತೆ ಸುರಕ್ಷತೆ ಹಾಗೂ ಪರ್ವತ ಮಾರ್ಗಗಳಲ್ಲಿ ಸಂಚಾರದ ಅಪಾಯಗಳ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿವೆ.

RELATED ARTICLES

Latest News