ಬೆಂಗಳೂರು, ನ.17- ಮಹಿಳೆಯರು ಅಧಿ ಕಾರದ ಸ್ಥಾನದಲ್ಲಿ ಕೂರುವುದಷ್ಟೇ ಮುಖ್ಯ ವಲ್ಲ. ನೀತಿ ಹಾಗೂ ನಿರ್ಣಯಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಬೆಳೆಸಿಕೊಳ್ಳ ಬೇಕೆಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೆಯರ ಸಮೇಳನದಲ್ಲಿ ಮಾತನಾಡಿದ ಅವರು, ಸಮೇಳನದಲ್ಲಿ ಭಾಗವಹಿಸಿರುವ ವಿವಿಧ ದೇಶಗಳ ನಾಯಕಿಯರು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೂ ಭೇಟಿ ನೀಡುವಂತೆ ಆಹ್ವಾನಿಸಿದರು.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಸಮೇಳನ ನಡೆಯುತ್ತಿರುವುದು ಹೆಮೆಯ ಸಂಗತಿ. ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿರುವುದು ಸಂತಸದ ವಿಚಾರ ಎಂದರು. ಮಹಿಳೆಯರು ಪೂಜಿಸಲ್ಪಡುವ ಸ್ಥಳದಲ್ಲಿ ಎಲ್ಲವೂ ಶುಭವಾಗುತ್ತದೆ ಎಂಬ ಮಾತಿದೆ. ಮಹಿಳಾ ಮೀಸಲಾತಿ ಕುರಿತು ಮುಂದಿನ ಡಿಸೆಂಬರ್ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ನಡೆಯುವ ಚರ್ಚೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದರು.
ಚುನಾವಣಾ ರಾಜಕೀಯ ಮಹಿಳೆಯರಿಗೆ ಸುಲಭವಾದ ಕ್ಷೇತ್ರವಲ್ಲ. ಆದರೂ ಸವಾಲುಗಳನ್ನು ಎದುರಿಸುವ ಸಮರ್ಥ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಮಹಿಳೆಯರು ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಸೋನಿಯಾ ಗಾಂಧಿಯವರ ನಾಯಕತ್ವವೂ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು. ಬೆಂಗಳೂರು ಶಿಕ್ಷಣ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ವಿವರಿಸಿದರು.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕರ್ನಾಟಕವೇ ಬುನಾದಿ ಹಾಕಿದ ನೆಲವಾಗಿದೆ. ವಚನ ಸಾಹಿತ್ಯದ ಕಾಲದಲ್ಲಿಯೇ ಶರಣರು ಅನುಭವ ಮಂಟಪದ ಮೂಲಕ ಎಲ್ಲರನ್ನು ಒಳಗೊಳ್ಳುವ ಸಂಸದೀಯ ವ್ಯವಸ್ಥೆಗೆ ನಾಂದಿ ಹಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗಿರುವುದನ್ನು ಸ್ವಾಗತಿಸಿದ ಅವರು, ಮಹಿಳಾ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಸವಾಲುಗಳ ಕುರಿತು ಸಮಗ್ರ ಚರ್ಚೆಯಾಗಬೇಕು. ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳನ್ನು ಪ್ರತ್ಯೇಕಗೊಳಿಸಿ ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಅಭಿಪ್ರಾಯಪಟ್ಟರು.
ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಮಾತನಾಡಿ, ಭಾರತ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಮುನ್ನಡೆಯುತ್ತಿದೆ. ದೇಶದ ಆರ್ಥಿಕ, ಸಾಮಾಜಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಹಾಗೂ ಬಿಜೆಪಿ ಸಂಸದೆ ಡಾ. ಡಿ. ಪುರಂದರೇಶ್ವರಿ ಮಾತನಾಡಿ, ಸುಸ್ಥಿರ ಅಭಿವೃದ್ಧಿಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಅಗತ್ಯ. ಮಹಿಳೆಯರ ಜ್ಞಾನ, ತಿಳುವಳಿಕೆ ಮತ್ತು ನಾಯಕತ್ವದ ಗುಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಸ್ಥೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ಅವಕಾಶಗಳನ್ನು ವಿಸ್ತರಿಸಬೇಕು ಎಂದರು.
ಲಿಂಗ ತಾರತಮ್ಯವಿಲ್ಲದ ಸಂಸದೀಯ ವ್ಯವಸ್ಥೆ ನಿರ್ಮಾಣವಾಗಬೇಕು. ಪ್ರತಿಯೊಂದು ಜವಾಬ್ದಾರಿಯನ್ನೂ ನಿಭಾಯಿಸುವ ಸಾಮರ್ಥ್ಯ ಮಹಿಳೆಯರಿಗಿದೆ. ಮಹಿಳಾ ಸ್ನೇಹಿ ಕಾನೂನು ಮತ್ತು ನೀತಿಗಳು ಜಾರಿಯಾಗಬೇಕು. ಲಿಂಗ ಆಧಾರಿತ ಆಯವ್ಯಯ ವ್ಯವಸ್ಥೆ ಜಾರಿಗೊಳಿಸುವುದರ ಜತೆಗೆ ದತ್ತಾಂಶ ಗೌಪ್ಯತೆ ರಕ್ಷಣೆ ಮತ್ತು ಅಂತರ್ಜಾಲ ಕಿರುಕುಳ ತಡೆಯಲು ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್ ಮಾತನಾಡಿ, ಸಂಸದೀಯ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಚರ್ಚೆ ಮತ್ತು ಕ್ರಮಗಳಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮೇಳನ ಮಹತ್ವದ ವೇದಿಕೆಯಾಗಲಿದೆ ಎಂದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ವಿಧಾನಸಭೆ ಉಪಸಭಾಧ್ಯಕ್ಷ ಮಾಂಕಾಳ ವೈದ್ಯ, ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
