ಬೆಂಗಳೂರು, ನ.17- ಜಿಬಿಎ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ನಗರೀಕರಣ, ಅತಿಯಾದ ಮಳೆ ಹಾಗೂ ಮಳೆನೀರು ಚರಂಡಿಗಳ ಸಾಮರ್ಥ್ಯದ ಕೊರತೆಯಿಂದ ಉಂಟಾಗುತ್ತಿರುವ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕರ್ನಾಟಕ ಜಲಭದ್ರತೆ ಮತ್ತು ಪ್ರವಾಹ ಸ್ಥಿತಿಸ್ಥಾಪಕತ್ವ ಯೋಜನೆ ಅಡಿಯಲ್ಲಿ 2,000 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ರೂಪಿಸಲಾಗಿದೆ.
ನಗರದ ಪ್ರಮುಖ ಮಳೆನೀರು ಚರಂಡಿಗಳ ಸಾಮರ್ಥ್ಯ ಹೆಚ್ಚಿಸುವುದು, ದುರ್ಬಲ ಚರಂಡಿ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ಪ್ರವಾಹದ ಅಪಾಯವನ್ನು ಕಡಿಮೆ ಮಾಡುವುದು ಈ ಯೋಜನೆಗೆ ಸಿಎಂ,ಡಿಕೆ ಶಿವಕುಮಾರ್ ಇಂದು ಚಾಲನೆ ನೀಡಲಿದ್ದಾರೆ. ಮಹಾದೇವಪುರ ವಿಧಾನಸಭೆ ವ್ಯಾಪ್ತಿಯ ಗುಂಜೂರು ವಾರ್ಡ್ನ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಒಟ್ಟು 351 ಮಳೆನೀರು ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ಇದರಲ್ಲಿ 247 ಕಾಮಗಾರಿಗಳು ಹೊರವಲಯದ ಪ್ರದೇಶಗಳಲ್ಲಿನ ಮಳೆನೀರು ಚರಂಡಿಗಳಿಗೆ ಸಂಬಂಧಿಸಿದ್ದರೆ, ಉಳಿದ 104 ಕಾಮಗಾರಿಗಳು ಒಳವಲಯದಲ್ಲಿರುವ ಆಯ್ದ ಪ್ರದೇಶಗಳ ಹಳೆಯ ಚರಂಡಿ ವ್ಯವಸ್ಥೆಗಳನ್ನು ಬಲಪಡಿಸುವುದು ಅಥವಾ ಪುನರ್ನಿರ್ಮಿಸುವುದಕ್ಕೆ ಸಂಬಂಧಿಸಿವೆ.
ಯೋಜನೆಗೆ ಒಟ್ಟು 2,000 ಕೋಟಿ ರೂ.ವೆಚ್ಚವಾಗಲಿದ್ದು, ಇದರಲ್ಲಿ 1,700 ಕೋಟಿ ರೂ. ವಿಶ್ವಬ್ಯಾಂಕ್ ನೆರವು ಹಾಗೂ 300 ಕೋಟಿ ರೂ.ಗಳು ಕರ್ನಾಟಕ ಸರ್ಕಾರದ ಪಾಲಿನ ಅನುದಾನವಾಗಿರಲಿದೆ,ಒಟ್ಟು 16 ಪ್ಯಾಕೇಜ್ಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಮಗಾರಿಗಳ ವಿವರ ಹೀಗಿದೆ:
ಹೊರವಲಯದ ಪ್ರದೇಶಗಳು: 247 ಮಳೆನೀರು ಚರಂಡಿ ಕಾಮಗಾರಿಗಳು; ಅಂದಾಜು ವೆಚ್ಚ 1,600 ಕೋಟಿ ರೂ.ಒಳವಲಯದ ಆಯ್ದ ಪ್ರದೇಶಗಳು: 104 ಹಳೆಯ ಚರಂಡಿ ಕಾಮಗಾರಿಗಳ ಬಲವರ್ಧನೆ ಅಥವಾ ಪುನರ್ನಿರ್ಮಾಣ; ಅಂದಾಜು ವೆಚ್ಚ 400 ಕೋಟಿ ವೆಚ್ಚ. ಒಟ್ಟು: 351 ಕಾಮಗಾರಿಗಳು; 2,000 ಕೋಟಿ ವೆಚ್ಚ.ಯೋಜನೆಯಡಿ ಅಗತ್ಯವಿರುವ ಕಡೆಗಳಲ್ಲಿ ಆರ್ಸಿಸಿ ತಳಹದಿ ಮತ್ತು ಚರಂಡಿ ರಚನೆಗಳನ್ನು ಬಲಪಡಿಸುವುದು, ಮಳೆನೀರು ಸಂಗ್ರಹಿಸುವ ರಚನೆಗಳನ್ನು ನಿರ್ಮಿಸುವುದು, ಪರಿಸರ ಸ್ನೇಹಿ ಪರಿಹಾರಗಳನ್ನು ಅಳವಡಿಸುವುದು ಹಾಗೂ ಪ್ರವಾಹ ನಿರ್ವಹಣೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಉದ್ದೇಶಿಸಲಾಗಿದೆ.
ಎಂಟು ವಲಯಗಳ ವ್ಯಾಪ್ತಿಯಲ್ಲಿ ಕಾಮಗಾರಿಯೋಜನೆಯ ಕಾಮಗಾರಿಗಳನ್ನು ಎಂಟು ವಲಯಗಳ ವ್ಯಾಪ್ತಿಯಲ್ಲಿ 16 ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಪ್ರಕ್ರಿಯೆ 2023ರಲ್ಲಿಯೇ ಆರಂಭವಾಗಿತ್ತು. 2023ರ ಏಪ್ರಿಲ್ 21ರಂದು ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಮಿತಿಯಲ್ಲಿ ಯೋಜನೆಯ ಕುರಿತು ಚರ್ಚೆ ನಡೆದಿತ್ತು. 2023ರ ಡಿಸೆಂಬರ್ 19ರಂದು ಯೋಜನಾ ವರದಿಯ ಪ್ರಾಥಮಿಕ ವಿವರಗಳನ್ನು ಸಿದ್ಧಪಡಿಸಲಾಯಿತು.
