ಬೆಂಗಳೂರು,ನ.17-ಸಹಜೀವನದಲ್ಲಿದ್ದ ಅತ್ತೆ ಮಗಳು ಬಿಟ್ಟುಹೋಗಿದ್ದರಿಂದ ಆಂಧ್ರ ಪ್ರದೇಶದ ಯುವಕನೊಬ್ಬ ಮನನೊಂದು ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಆಂಧ್ರಪ್ರದೇಶದ ಹಿಂದೂ ಪುರ ನಿವಾಸಿ ಪವನ್ಕುಮಾರ್(28) ಆತ್ಮಹತ್ಯೆಗೆ ಶರಣಾದ ಯುವಕ.
ಪವನ್ಕುಮಾರ್ ತನ್ನ ಅತ್ತೆ ಮಗಳು ನಾಗಮಣಿಯನ್ನು ಪ್ರೀತಿಸುತ್ತಿದ್ದನು. ಆದರೆ ನಾಗಮಣಿಗೆ ಬೇರೆ ಯುವಕನ ಜೊತೆ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಈಕೆ ಗಂಡ, ಮಕ್ಕಳೊಂದಿಗೆ ವಾಸವಿದ್ದರು.
ಈ ನಡುವೆ ಎರಡು ವರ್ಷದ ಹಿಂದೆ ಗಂಡ, ಮಕ್ಕಳನ್ನು ಬಿಟ್ಟು ನಾಗಮಣಿ ಆತನೊಂದಿಗೆ ಹೋಗಿದ್ದಾಳೆ. ನಂತರ ಪವನ್ ಹಾಗೂ ನಾಗಮಣಿ ರಾಜಾನುಕುಂಟೆ ಸೇರಿದಂತೆ ಹಲವು ಬಾಡಿಗೆ ಮನೆಗಳಲ್ಲಿ ಲಿವಿಂಗ್-ಟು-ಗೆದರ್ನಲ್ಲಿದ್ದರು. ತದನಂತರದಲ್ಲಿ ಇವರಿಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಜಗಳವಾಗಿದೆ.
ಅದೇ ಕೋಪಕ್ಕೆ ನಾಗಮಣಿ ಆತನನ್ನು ತೊರೆದು ವಾಪಸ್ ಗಂಡನ ಮನೆಗೆ ಹೋಗಿದ್ದಾಳೆ. ಅತ್ತೆ ಮಗಳು ತನ್ನನ್ನು ಬಿಟ್ಟು ಹೋಗಿದ್ದರಿಂದ ಆಕೆಯನ್ನು ಹುಡುಕಿಕೊಂಡು ಮೊನ್ನೆ ಆಂಧ್ರದಿಂದ ಬೆಂಗಳೂರು ಉತ್ತರ ತಾಲ್ಲೂಕಿನ ಹನುಮಂತ ಸಾಗರ ಬಳಿ ಬಂದು ಹುಡುಕಿ ದರೂ ಮನೆ ಸಿಕ್ಕಿಲ್ಲ.
ನಾಗಮಣಿಗೆ ಹಲವು ಭಾರಿ ಪವನ್ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಮನನೊಂದ ಆತ ಸಮೀಪದಲ್ಲೇ ಇದ್ದ ಪೆಟ್ರೋಲ್ ಬಂಕ್ಗೆ ಹೋಗಿ ಪೆಟ್ರೋಲ್ ಖರೀದಿಸಿಕೊಂಡು ಬಂದು ನಡುರಸ್ತೆಯಲ್ಲೇ ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನು ಗಮನಿಸಿದ ಸಾರ್ವ ಜನಿಕರು ತಕ್ಷಣ ಬೆಂಕಿಯನ್ನು ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಪವನ್ ಮೃತಪಟ್ಟಿದ್ದಾನೆ.
ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
