ಮನಿಲಾ, ನ.17- ಪ್ರಧಾನಿ ನರೇಂದ್ರ ಮೋದಿ ಅವರು ಫಿಲಿಪ್ಪೀನ್ಸ್ನ ಅತ್ಯಂತ ಹಳೆಯ ಗುರುದ್ವಾರಕ್ಕೆ ಭೇಟಿ ನೀಡಿ, ಅದರ ಪುನರಾಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.ಮೂರು ದಿನಗಳ ಫಿಲಿಪ್ಪೀನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಮನಿಲಾದಲ್ಲಿ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಗುರುದ್ವಾರ ಖಾಲ್ಸಾ ದಿವಾನ್ಗೆ ಭೇಟಿ ನೀಡಿರುವುದು ತಮಗೆ ಅತ್ಯಂತ ಸಂತೋಷ ಮತ್ತು ಆಶೀರ್ವಾದದ ಅನುಭವ ನೀಡಿದೆ ಎಂದು ಹೇಳಿದ್ದಾರೆ.
ಮನಿಲಾದ ಅತ್ಯಂತ ಹಳೆಯ ಗುರುದ್ವಾರದ ಪುನರಾಭಿವೃದ್ಧಿ ಕಾಮಗಾರಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಖಾಲ್ಸಾ ದಿವಾನ್ ಗುರುದ್ವಾರವು ಒಂದು ಶತಮಾನಕ್ಕೂ ಹೆಚ್ಚು ಕಾಲ ಭಾರತ ಮತ್ತು ಫಿಲಿಪ್ಪೀನ್ಸ್ ನಡುವಿನ ಸಾಂಸ್ಕೃತಿಕ ಹಾಗೂ ಜನರ ನಡುವಿನ ಬಾಂಧವ್ಯದ ಸಂಕೇತವಾಗಿ ನಿಂತಿದೆ ಎಂದು ಸಚಿವಾಲಯ ತಿಳಿಸಿದೆ.ಗುರುದ್ವಾರದ ಮಹತ್ವದ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ, ಇದು ಅಪಾರ ಆಧ್ಯಾತ್ಮಿಕ ಮಹತ್ವ ಹೊಂದಿರುವ ಕೇಂದ್ರವಾಗಿದೆ ಎಂದು ಹೇಳಿದ್ದರು.
ಗುರು ಸಾಹಿಬರ ಬೋಧನೆಗಳಿಂದ ಪ್ರೇರಣೆ ಪಡೆದ ಸಿಖ್ ಸಮುದಾಯವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇತರರ ಸೇವೆ ಮಾಡುವಲ್ಲಿ ಮತ್ತು ಉತ್ತಮ ಜಗತ್ತಿನ ನಿರ್ಮಾಣದಲ್ಲಿ ಈ ಸಮುದಾಯ ಸದಾ ಮುಂಚೂಣಿಯಲ್ಲಿದೆ ಎಂದು ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
