ಮಂಡ್ಯ,ನ.20-ಮಳವಳ್ಳಿ ಪಟ್ಟಣದಲ್ಲಿ ಕಳ್ಳರು ಅಟ್ಟಹಾಸ ಮೆರೆದಿದ್ದು, ಒಂದೇ ರಾತ್ರಿ ಮೂರು ನಂದಿನಿ ಉತ್ಪನ್ನ ಮಾರಾಟ ಕೇಂದ್ರಗಳಲ್ಲಿ ಸರಣಿ ಕಳ್ಳತನ ನಡೆಸಿ ಸುಮಾರು 50 ಸಾವಿರಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದಾರೆ.
ಮೈಸೂರು ಮುಖ್ಯ ರಸ್ತೆಯ ತಾಲೂಕು ಪಂಚಾಯಿತಿ ಬಳಿ ಇರುವ ವಡ್ಡರಹಳ್ಳಿ ಮಹೇಶ್ ಅವರಿಗೆ ಸೇರಿದ ನಂದಿನಿ ಕೇಂದ್ರ, ದಯಾನಂದ ನರ್ಸಿಂಗ್ ಹೋಂ ಪಕ್ಕದಲ್ಲಿರುವ ಚೆನ್ನೇಗೌಡನದೊಡ್ಡಿ ಮಹೇಶ್ ಅವರಿಗೆ ಸೇರಿದ ಕೇಂದ್ರ ಹಾಗೂ ಎನ್.ಇ.ಎಸ್ ಬಡಾವಣೆಯ ಬಾಣಗಹಳ್ಳಿ ಗಂಗಾಧರ ಅವರಿಗೆ ಸೇರಿದ ನಂದಿನಿ ಕೇಂದ್ರದಲ್ಲಿ ಈ ಕಳ್ಳತನ ನಡೆದಿದೆ.
ಬೈಕ್ನಲ್ಲಿ ಬಂದಿದ್ದ ಇಬ್ಬರು ಕಬ್ಬಿಣದ ರಾಡ್ ಬಳಸಿ ಕೇಂದ್ರಗಳ ರೋಲಿಂಗ್ ಶೆಟರ್ಗಳನ್ನು ಮೀಟಿ ಒಳನುಗ್ಗಿ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ಹಾಗೂ ಇತರ ವಸ್ತುಗಳನ್ನು ದೋಚಿದ್ದಾರೆ. ಬೆಳಗ್ಗೆ ಅಂಗಡಿ ತೆರೆದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ಕೇಂದ್ರಗಳ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಾಲೂಕು ಪಂಚಾಯಿತಿ ಬಳಿಯ ಕೇಂದ್ರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡಿರುವುದು ಕ್ಯಾಮೆರಾದಲ್ಲಿ ಕಂಡುಬಂದಿದೆ.
ಮೂರು ಕಡೆ ಕಳ್ಳತನದ ಬಗ್ಗೆ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಶೀಘ್ರದಲ್ಲೇ ಕಳ್ಳರನ್ನು ಪತ್ತೆಹಚ್ಚುತ್ತೇವೆ ಪೊಲೀಸರು ತಿಳಿಸಿದ್ದು, ಘಟನೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದೇ ರಾತ್ರಿ ಮೂರು ಕಡೆ ಸರಣಿ ಕಳ್ಳತನ ನಡೆದಿರುವುದು ಪಟ್ಟಣದಲ್ಲಿ ಆತಂಕ ಮೂಡಿಸಿದ್ದು, ರಾತ್ರಿ ಗಸ್ತು ಹೆಚ್ಚಿಸುವಂತೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
