Homeರಾಜ್ಯಕರ್ನಾಟಕದ ಕಿರುಬಂಡವಾಳ ವಲಯದಲ್ಲಿ ಚೇತರಿಕೆ : ಸಾಲದ ಬಾಕಿ ಪ್ರಮಾಣ ಶೇ.8.6ರಿಂದ ಶೇ. 1.3ಕ್ಕೆ ಇಳಿಕೆ

ಕರ್ನಾಟಕದ ಕಿರುಬಂಡವಾಳ ವಲಯದಲ್ಲಿ ಚೇತರಿಕೆ : ಸಾಲದ ಬಾಕಿ ಪ್ರಮಾಣ ಶೇ.8.6ರಿಂದ ಶೇ. 1.3ಕ್ಕೆ ಇಳಿಕೆ

ಬೆಂಗಳೂರು, ನ.20- ರಾಜ್ಯದ ಕಿರುಬಂಡವಾಳ ವಲಯವು ಗಣನೀಯ ಚೇತರಿಕೆ ಕಂಡಿದ್ದು, ಸಾಲ ಮರುಪಾವತಿ ಪ್ರಮಾಣ ಸುಧಾರಿಸಿದೆ. ಕಳೆದ ಒಂದು ವರ್ಷದಲ್ಲಿ ಆರಂಭಿಕ ಬಾಕಿ ಸಾಲಗಳ ಪ್ರಮಾಣ ಶೇ. 8.6 ರಿಂದ ಶೇ. 1.3ಕ್ಕೆ ಇಳಿದಿದೆ. ಇದು ರಾಷ್ಟ್ರೀಯ ಸರಾಸರಿ ಶೇ. 1.8ಕ್ಕಿಂತ ಉತ್ತಮ ಸಾಧನೆಯಾಗಿದೆ.

ನಗರದಲ್ಲಿ ನಡೆದ ಅಸೋಸಿಯೇಷನ್‌ ಆಫ್‌ ಕರ್ನಾಟಕ ಮೈಕ್ರೋಫೈನಾನ್ಸ್ ಇನ್ಸ್ಟಿಟ್ಯೂಷನ್ಸ್ ಆಯೋಜಿಸಿದ್ದ ಮೈಕ್ರೋಫೈನಾನ್ಸ್ ಕರ್ನಾಟಕ ಶೃಂಗಸಭೆ-2026ರಲ್ಲಿ ಈ ಅಂಕಿಅಂಶಗಳನ್ನು ಪ್ರಕಟಿಸಲಾಯಿತು. ಸೆಪ್ಟೆಂಬರ್‌ 2026ರ ಅಂತ್ಯಕ್ಕೆ ಕರ್ನಾಟಕದ ಕಿರುಬಂಡವಾಳ ಸಾಲದ ಮೊತ್ತದಲ್ಲಿ ಶೇ. 7ರಷ್ಟು ಬೆಳವಣಿಗೆಯಾಗಿದ್ದು, 24,481 ಕೋಟಿ ರೂ.ಗೆ ತಲುಪಿದೆ. ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 5,367 ಕೋಟಿ ರೂ. ಸಾಲ ವಿತರಿಸಲಾಗಿದೆ. ಮಾರ್ಚ್‌ 2026ರ ಅಂತ್ಯಕ್ಕೆ 102.6 ಲಕ್ಷ ಸಕ್ರಿಯ ಸಾಲ ಖಾತೆಗಳಿದ್ದು, ಒಟ್ಟು ಬಾಕಿ ಸಾಲದ ಮೊತ್ತ 59,160 ಕೋಟಿ ರೂ.ಆಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಬಾಕಿ ಸಾಲದ ಪ್ರಮಾಣ ಶೇ. 12.5ರಿಂದ ಶೇ. 1.5ಕ್ಕೆ ಇಳಿದಿದ್ದರೆ, ಕಲಬುರಗಿಯಲ್ಲಿ ಶೇ. 6.6ರಿಂದ ಶೇ. 1.5ಕ್ಕೆ ಕುಸಿದಿದೆ. ರಾಜ್ಯವು ರಾಷ್ಟ್ರೀಯ ಕಿರುಬಂಡವಾಳ ಮಾರುಕಟ್ಟೆಯಲ್ಲಿ ಶೇ. 9ರಷ್ಟು ಪಾಲು ಹೊಂದಿದ್ದು, ದೇಶದ ನಾಲ್ಕನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.

ಶೃಂಗಸಭೆಯಲ್ಲಿ ಕರ್ನಾಟಕ ಸರ್ಕಾರ, ಆರ್‌ಬಿಐ, ನಬಾರ್ಡ್‌ ಹಾಗೂ ಸಾಲದಾತ ಸಂಸ್ಥೆಗಳ ಪ್ರತಿನಿಧಿಗಳು ಸಾಲಗಾರರ ಹಿತಾಸಕ್ತಿ, ಜವಾಬ್ದಾರಿಯುತ ಸಾಲ ವಿತರಣೆ ಮತ್ತು ಸುಸ್ಥಿರ ಬೆಳವಣಿಗೆಯ ಕುರಿತು ಚರ್ಚಿಸಿದರು. ಮುಂದಿನ ದಿನಗಳಲ್ಲಿ ಸಾಲದ ಪ್ರಮಾಣಕ್ಕಿಂತ ಸಾಲದ ಗುಣಮಟ್ಟ ಮತ್ತು ಸಾಲಗಾರರ ಮರುಪಾವತಿ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಜ್ಞರು ಅಭಿಪ್ರಾಯಪಟ್ಟರು.

RELATED ARTICLES

Latest News