Homeರಾಷ್ಟ್ರೀಯರಾಜಸ್ಥಾನ : ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕ್ರೂಸರ್‌ ಅಪ್ಪಳಿಸಿ 9 ಮಂದಿ ದುರ್ಮರಣ

ರಾಜಸ್ಥಾನ : ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕ್ರೂಸರ್‌ ಅಪ್ಪಳಿಸಿ 9 ಮಂದಿ ದುರ್ಮರಣ

ಕೋಟಾ, ನ.23- (ಪಿಟಿಐ) ರಾಜಸ್ಥಾನದ ಕೋಟಾ-ಉದಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಶಂಭುಪುರ ಬಳಿ ಇಂದು ಮುಂಜಾನೆ ವೇಗವಾಗಿ ಬಂದ ಕ್ರೂಸರ್‌ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಸಿಕಾರ್‌ ಜಿಲ್ಲೆಯಲ್ಲಿರುವ ಖಾತು ಶ್ಯಾಮ್‌ಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೋಟಾ ನಗರ ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್‌‍ಪಿ) ತೇಜೇಶ್ವನಿ ಗೌತಮ್‌ ಅವರು ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ವಾಹನದೊಳಗೆ ಸಿಲುಕಿದ್ದವರನ್ನು ಹೊರತೆಗೆಯುವ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಪ್ರಾಥಮಿಕ ವರದಿಗಳ ಪ್ರಕಾರ, ಕ್ರೂಸರ್‌ ಚಾಲಕ ವಾಹನ ಚಲಾಯಿಸುವಾಗ ನಿದ್ರೆಗೆ ಜಾರಿದ್ದಿರಬಹುದು ಎಂದು ಶಂಕಿಸಲಾಗಿದೆ.

ಈ ಕ್ರೂಸರ್‌ ವಾಹನದಲ್ಲಿ ಮಹಾರಾಷ್ಟ್ರದ ಧುಲೆ ಜಿಲ್ಲೆಗೆ ಸೇರಿದ ಒಂದೇ ಕುಟುಂಬದ 16 ಮಂದಿ ಪ್ರಯಾಣಿಸುತ್ತಿದ್ದರು. ಟ್ರಕ್‌ ಚಾಲಕ ಹಾರೂನ್‌ ಸುದ್ದಿಗಾರರಿಗೆ ತಿಳಿಸಿದ ಪ್ರಕಾರ, ವಾಹನದಲ್ಲಿನ ತಾಂತ್ರಿಕ ದೋಷವೊಂದನ್ನು ಪರಿಶೀಲಿಸಲು ಅವರು ಟ್ರಕ್‌ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.

ಅವರು ಸ್ವಲ್ಪ ದೂರದಲ್ಲಿ ನಿಂತಿದ್ದಾಗ, ವೇಗವಾಗಿ ಬಂದ ಕ್ರೂಸರ್‌ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ತಾನು ರಸ್ತೆಯಿಂದ ಸುಮಾರು 20 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದಾಗಿ ಅವರು ಹೇಳಿದರು. 10 ನಿಮಿಷಗಳ ನಂತರ ಪ್ರಜ್ಞೆ ಬಂದಾಗ, ತಾವೇ ಸ್ವತಃ ಪೊಲೀಸರಿಗೆ ಮತ್ತು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾಗಿ ತಿಳಿಸಿದರು.

ಅವರಿಗೆ ಮೊಣಕಾಲು ಮತ್ತು ತಲೆಯ ಭಾಗದಲ್ಲಿ ಗಾಯಗಳಾಗಿವೆ. ಗಾಯಗೊಂಡವರನ್ನು ನ್ಯೂ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆೞಗೆ ದಾಖಲಿಸಲಾಗಿದೆ. ಮೃತರನ್ನು ಉಷಾ (60), ಸುಶೀಲಾ (65), ಕೈಲಾಶ್‌ (45), ಜಾನ್ವಿ (6), ಸಜ್ಜನ್‌ (60), ಅನಿತಾ, ಬಾಬುಲಾಲ್‌ (60), ಜಾನ್ವಿ (13) ಮತ್ತು ಮಾಧವಿ (45) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಎರಡೂ ವಾಹನಗಳ ಚಾಲಕರೂ ಸೇರಿದ್ದಾರೆ.

RELATED ARTICLES

Latest News