ಬೆಳಗಾವಿ, ನ. 22 (ಪಿಟಿಐ): ಲೇಖಕ ರವಿ ಹಂಜ್ ಅವರನ್ನು ಕೊಲ್ಲುವವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಲಿಂಗಾಯತ ನಾಯಕರೊಬ್ಬರು ಘೋಷಿಸಿದ್ದಾರೆ. ರವಿ ಹಂಜ್ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ.
ಈ ಘೋಷಣೆಯಾದ ತಕ್ಷಣವೇ, ಮೊಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರು ಮಧ್ಯಪ್ರವೇಶಿಸಿ, ಯಾರನ್ನಾದರೂ ಶಿರಚ್ಛೇದನ ಮಾಡುವ (ಕೊಲ್ಲುವ) ಕರೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.ಲಿಂಗಾಯತ ನಾಯಕ ಪ್ರಕಾಶ್ ಮಹಾಜನ್ ಅವರ ಈ ಘೋಷಣೆಯನ್ನು ಗಂಭೀರವಾಗಿ ಪರಿಗಣಿಸದಂತೆ ಅವರು ಜನರಿಗೆ ಮನವಿ ಮಾಡಿದರು.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸ್ವಾಮೀಜಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಹಾಜನ್, ರವಿ ಹಂಜ್ ಅವರನ್ನು ಕೊಲ್ಲುವಂತೆ ಬಹಿರಂಗವಾಗಿ ಕರೆ ನೀಡಿದರು. ಅಲ್ಲದೆ, 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಅವರು, ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ, ಕೊಲೆ ಮಾಡಿದವರು ಹಣ ಪಡೆಯಲು ತಮ್ಮನ್ನು ಸಂಪರ್ಕಿಸುವಂತೆ ಹೇಳಿದರು.
ಅವರನ್ನು ಕೊಲ್ಲಬೇಕು. ಅವರನ್ನು ಕೊಲ್ಲುವವರಿಗೆ ನಾನು 5 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಇಲ್ಲಿ ಘೋಷಿಸುತ್ತೇನೆ. ಇದನ್ನು ಮಾಡಲು ಬಯಸುವವರು ನನ್ನ ಮೊಬೈಲ್ ಸಂಖ್ಯೆಯನ್ನು ಬರೆದುಕೊಳ್ಳಿ. ಕೊಲೆ ಮಾಡಿದ ನಂತರ ಈ ಸಂಖ್ಯೆಗೆ ಕರೆ ಮಾಡಿ ನನ್ನ ಬಳಿ ಬನ್ನಿ. ನಿಮಗೆ 5 ಲಕ್ಷ ರೂಪಾಯಿ ಸಿಗುತ್ತದೆ, ಎಂದು ಮಹಾಜನ್ ಹೇಳಿದರು.
ಮಹಾಜನ್ ಅವರು ವಿದ್ವಾಂಸ ಎಂ.ಎಂ. ಕಲ್ಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗಳ ಬಗ್ಗೆಯೂ ಪ್ರಸ್ತಾಪಿಸಿದರು. ಕೊಲೆ ಮಾಡಿದವರನ್ನು ಬಂಧಿಸಲಾಗಿದೆಯಾದರೂ, ತೆರೆಮರೆಯಲ್ಲಿ ಅವರಿಗೆ ಬೆಂಬಲ ನೀಡಿದವರನ್ನು ಇನ್ನೂ ಬಂಧಿಸಿಲ್ಲ ಎಂದು ಅವರು ಆರೋಪಿಸಿದರು.ಆ ಹತ್ಯೆಗಳ ಹಿಂದೆ ಇದ್ದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಅಂದಿನ ಸರ್ಕಾರವೇ ಇದಕ್ಕೆ ಜವಾಬ್ದಾರ ಎಂದು ಅವರು ದೂರಿದರು.
ರವಿ ಹಂಜ್ ಅವರ ಬಸವ ಮಂಟಪ ಎಂಬ ಪುಸ್ತಕ ಮತ್ತು ಬಸವ ತತ್ವದ ಬಗ್ಗೆ ಅವರು ನೀಡಿದ್ದಾರೆನ್ನಲಾದ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಮಹಾಜನ್ ಅವರು ಪತ್ರಕರ್ತ ವಿಶ್ವೇಶ್ವರ ಭಟ್ ಅವರನ್ನೂ ಟೀಕಿಸಿದರು ಮತ್ತು ಅವರು ರವಿ ಹಂಜ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಸವ ಭಕ್ತರನ್ನು ಅವಮಾನಿಸುವ ಮತ್ತು ಟೀಕಿಸುವವರು ಈ ಭೂಮಿಯ ಮೇಲೆ ಮತ್ತೆ ಹುಟ್ಟಬಾರದು. ಇಂತಹ ಕೆಲಸವನ್ನು ಯಾರೂ ಎಂದಿಗೂ ಮಾಡಬಾರದು, ಎಂದು ಹೇಳಿದ ಅವರು, ಬಸವ ಧರ್ಮಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಪ್ರತಿಭಟನಾಕಾರರು ಸಹಿಸುವುದಿಲ್ಲ ಎಂದು ಪ್ರತಿಪಾದಿಸಿದರು.
12ನೇ ಶತಮಾನದ ಸಮಾಜ ಸುಧಾರಕ ಮತ್ತು ಲಿಂಗಾಯತ ಚಳುವಳಿಯ ಸ್ಥಾಪಕರಾದ ಬಸವೇಶ್ವರರ ವಿರುದ್ಧ ಅವಹೇಳನಕಾರಿ ಹಾಗೂ ಕೀಳು ಮಟ್ಟದ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾದ ಹಂಜ್ರವರ ಇತ್ತೀಚಿನ ಸಂದರ್ಶನವೊಂದರ ನಂತರ ಈ ವಿವಾದ ಭುಗಿಲೆದ್ದಿದೆ.
ಕರ್ನಾಟಕ ಸರ್ಕಾರವು ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ ಮತ್ತು ಅದರ ಲೇಖಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಹಂಜಿಯವರನ್ನು ಕೇರಳದ ಕೊಚ್ಚಿಯಲ್ಲಿ ಬಂಧಿಸಲಾಗಿದೆ.
