ನವದೆಹಲಿ,ನ.22- ರಾಜಸ್ಥಾನ, ಗುಜರಾತ್ ಹಾಗೂ ಜಾಖಂಡ್ ರಾಜ್ಯಗಳಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಭೀಕರ ರಸ್ತೆ ಅಪಘಾತ ಪ್ರಕರಣಗಳಲ್ಲಿ ಸೇನಾ ಕುಟುಂಬದ ಏಳು ಮಂದಿ ಸೇರಿದಂತೆ 20 ಮಂದಿ ಬಲಿಯಾಗಿದ್ದಾರೆ. ಘಟನೆಯಲ್ಲಿ ಇನ್ನಿತರ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಕೋಟಾ;
ರಾಜಸ್ಥಾನದ ಕೋಟಾ-ಉದಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಶಂಭುಪುರ ಬಳಿ ಇಂದು ಮುಂಜಾನೆ ವೇಗವಾಗಿ ಬಂದ ಕ್ರೂಸರ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಸಿಕಾರ್ ಜಿಲ್ಲೆಯಲ್ಲಿರುವ ಖಾತು ಶ್ಯಾಮ್ಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜಸ್ಥಾನ : ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ಗೆ ಕ್ರೂಸರ್ ಅಪ್ಪಳಿಸಿ 9 ಮಂದಿ ದುರ್ಮರಣ
ಪ್ರಾಥಮಿಕ ವರದಿಗಳ ಪ್ರಕಾರ, ಕ್ರೂಸರ್ ಚಾಲಕ ವಾಹನ ಚಲಾಯಿಸುವಾಗ ನಿದ್ರೆಗೆ ಜಾರಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ಕ್ರೂಸರ್ ವಾಹನದಲ್ಲಿ ಮಹಾರಾಷ್ಟ್ರದ ಧುಲೆ ಜಿಲ್ಲೆಗೆ ಸೇರಿದ ಒಂದೇ ಕುಟುಂಬದ 16 ಮಂದಿ ಪ್ರಯಾಣಿಸುತ್ತಿದ್ದರು. ಟ್ರಕ್ ಚಾಲಕ ಹಾರೂನ್ ಸುದ್ದಿಗಾರರಿಗೆ ತಿಳಿಸಿದ ಪ್ರಕಾರ, ವಾಹನದಲ್ಲಿನ ತಾಂತ್ರಿಕ ದೋಷವೊಂದನ್ನು ಪರಿಶೀಲಿಸಲು ಅವರು ಟ್ರಕ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.
ಅವರು ಸ್ವಲ್ಪ ದೂರದಲ್ಲಿ ನಿಂತಿದ್ದಾಗ, ವೇಗವಾಗಿ ಬಂದ ಕ್ರೂಸರ್ ವಾಹನವು ಟ್ರಕ್ಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ತಾನು ರಸ್ತೆಯಿಂದ ಸುಮಾರು 20 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದಾಗಿ ಅವರು ಹೇಳಿದರು. 10 ನಿಮಿಷಗಳ ನಂತರ ಪ್ರಜ್ಞೆ ಬಂದಾಗ, ತಾವೇ ಸ್ವತಃ ಪೊಲೀಸರಿಗೆ ಮತ್ತು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾಗಿ ತಿಳಿಸಿದರು.
ಅವರಿಗೆ ಮೊಣಕಾಲು ಮತ್ತು ತಲೆಯ ಭಾಗದಲ್ಲಿ ಗಾಯಗಳಾಗಿವೆ. ಗಾಯಗೊಂಡವರನ್ನು ನ್ಯೂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಉಷಾ (60), ಸುಶೀಲಾ (65), ಕೈಲಾಶ್ (45), ಜಾನ್ವಿ (6), ಸಜ್ಜನ್ (60), ಅನಿತಾ, ಬಾಬುಲಾಲ್ (60), ಜಾನ್ವಿ (13) ಮತ್ತು ಮಾಧವಿ (45) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಎರಡೂ ವಾಹನಗಳ ಚಾಲಕರೂ ಸೇರಿದ್ದಾರೆ.
ಕಚ್ ;
ಗುಜರಾತ್ನ ಕಚ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸೇನಾ ಸಿಬ್ಬಂದಿ ಕುಟುಂಬಕ್ಕೆ ಸೇರಿದ ಮೂವರ ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ರಣ್ ಆಫ್ ಕಚ್ಗೆ ಭೇಟಿ ನೀಡಿ ಭುಜ್ಗೆ ಹಿಂದಿರುಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಕಚ್ ಪಶ್ಚಿಮ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೂರು ತಿಂಗಳ ಹೆಣ್ಣು ಮಗು ಸೇರಿದಂತೆ ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರನ್ನು ಸೌರಭ್ ಸಿಂಗ್ ನೇಗಿ (30), ಅವರ ಪತ್ನಿ ಸವಿತಾ (30), ಮೂರು ತಿಂಗಳ ಪುತ್ರಿ ಶಿವಿಕಾ, ರಾಜೇಶ್ ಸಿಂಗ್ ರಾವತ್ (35), ಅವರ ಪುತ್ರಿ ರಕ್ಷಿತಾ (7), ರಿಂಕಿ ಗೋಸೈನ್ (30) ಹಾಗೂ ಅವರ ನಾಲ್ಕು ವರ್ಷದ ಪುತ್ರಿ ವಾಮಿಕಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನ ಅವಶೇಷಗಳಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.ಮೃತರೆಲ್ಲರೂ ಉತ್ತರಾಖಂಡದ ಗಢ್ವಾಲ್ ಮೂಲದವರಾಗಿದ್ದು, ಭುಜ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿಯ ಕುಟುಂಬ ಸದಸ್ಯರಾಗಿದ್ದಾರೆ.ಕುಂತಿ; ಜಾರ್ಖಂಡ್ನ ಕುಂತಿ ಜಿಲ್ಲೆಯಲ್ಲಿ ಎರಡು ಮೋಟಾರ್ಸೈಕಲ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ರಾಣಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ತುರಿಗಹಾರ್ ಗ್ರಾಮದ ಬಳಿ, ರಾಣಿಯಾ-ಮಾರ್ಚಾ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರು, ಒಬ್ಬರು ಟೋರ್ಪಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಮತ್ತು ಮತ್ತೊಬ್ಬರು ರಾಂಚಿಗೆ ಕರೆದೊಯ್ಯುವ ಮಾರ್ಗದಲ್ಲಿ ಗಾಯಗಳಿಂದಾಗಿ ಮೃತಪಟ್ಟರು.
ಮೂರು ಮಂದಿ ಒಂದು ಮೋಟಾರ್ಸೈಕಲ್ನಲ್ಲಿ ರಾಣಿಯಾ ಕಡೆಯಿಂದ ಬರುತ್ತಿದ್ದರು ಮತ್ತು ಇಬ್ಬರು ಮಾರ್ಚಾ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಈ ಡಿಕ್ಕಿ ಸಂಭವಿಸಿದೆ ಎಂದು ಅವರು ಹೇಳಿದರು. ಪ್ರತಿಕೂಲ ಹವಾಮಾನ ಮತ್ತು ಕಡಿಮೆ ಗೋಚರತೆಯಿಂದಾಗಿ ಈ ಎರಡು ಮೋಟಾರ್ಸೈಕಲ್ಗಳು ಪರಸ್ಪರ ಡಿಕ್ಕಿ ಹೊಡೆದಿರಬಹುದು, ಎಂದು ಅಧಿಕಾರಿ ತಿಳಿಸಿದರು.
ಮೃತಪಟ್ಟ ನಾಲ್ವರ ಪೈಕಿ ಇಬ್ಬರನ್ನು ಹೇಮಂತ್ ಬಹದ್ದೂರ್ (21) ಮತ್ತು ವಿಶ್ವ ಸಿಂಗ್ (17) ಎಂದು ಗುರುತಿಸಲಾಗಿದೆ. ಇವರಿಬ್ಬರೂ ರಾಣಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬನಬೀರಾ ನವಾತೋಲಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಮೃತಪಟ್ಟ ಉಳಿದ ಇಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು. ಅಪಘಾತ ಸಂಭವಿಸಿದಾಗ ಯಾರೊಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಂತಿ ಸಾದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ, ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.
