ನ್ಯೂಯಾರ್ಕ್,ಏ.25- ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಇಸ್ರೇಲ್ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇಸ್ರೇಲ್‍ನೊಂದಿಗಿನ ವಾಣಿಜ್ಯ ಸಂಬಂಧ ಸ್ಥಗಿತಗೊಳಿಸಿ ಅಥವಾ ಗಾಜಾದಲ್ಲಿ ಈಗ ನಡೆಯುತ್ತಿರುವ ಯುದ್ಧವನ್ನು ಬೆಂಬಲಿಸುವ ಯಾವುದೇ ಕಂಪನಿಯೊಂದಿಗೆ ವ್ಯಾಪಾರ ವಹಿವಾಟು ಮಾಡಬೇಡಿ ಎಂಬುದೇ ಈ ವಿದ್ಯಾರ್ಥಿಗಳ ಒಕ್ಕೊರಲ ಒತ್ತಾಯವಾಗಿದೆ.
ಪ್ಯಾಲೆಸ್ತೀನಿಯನ್ನರ ಕುರಿತು ಇಸ್ರೇಲ್ ಧೋರಣೆಯನ್ನು ಖಂಡಿಸಿ ಇಸ್ರೇಲ್ ವಿರುದ್ಧ ಬಹಿಷ್ಕಾರ, ಬಂಡವಾಳ ಹಿಂತೆಗೆತ ಮತ್ತು ಆರ್ಥಿಕ ದಿಗ್ಬಂಧನದಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬೇಡಿಕೆ ದಶಕಗಳಷ್ಟು ಹಿಂದಿನಿಂದಲೂ ಇದೆ.
ಇಸ್ರೇಲ್-ಹಮಾಸ್ ನಡುವಿನ ಸಮರ ಆರು ತಿಂಗಳು ದಾಟಿದ್ದು ಗಾಜಾದಲ್ಲಿ ಜನರ ನರಳಾಟ ಕಂಡು ಕದನ ವಿರಾಮ ಘೋಷಿಸುವಂತೆ ಅಂತಾರಾಷ್ಟ್ರೀಯ ಸಮುದಾಯ ಕರೆ ನೀಡಿರುವ ಈ ಹೊತ್ತಿನಲ್ಲಿ ಇಸ್ರೇಲ್ ವಿರುದ್ಧದ ಪ್ರತಿಭಟನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ಕಳೆದ ವಾರ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನಾನಿರತ 100 ಕ್ಕೂ ಅಧಿಕ ವಿದ್ಯಾರ್ಥಿಗಳ ಬಂಧನದಿಂದ ಪ್ರೇರಿತರಾಗಿ ಮಸಾಚ್ಯುಸೆಟ್ಸ್‍ನಿಂದ ಕಾಲಿಫೋರ್ನಿಯಾವರೆಗಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದು ಟೆಂಟ್‍ಗಳನ್ನು ನಿರ್ಮಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.