Homeಜಿಲ್ಲಾ ಸುದ್ದಿಗಳುಚಿಕ್ಕಮಗಳೂರು ಸುತ್ತಮುತ್ತಲ ಕೆರೆಗಳಲ್ಲಿ ಕ್ಷೀಣಿಸಿದ ವಲಸೆ ಹಕ್ಕಿಗಳ ಸಂಖ್ಯೆ

ಚಿಕ್ಕಮಗಳೂರು ಸುತ್ತಮುತ್ತಲ ಕೆರೆಗಳಲ್ಲಿ ಕ್ಷೀಣಿಸಿದ ವಲಸೆ ಹಕ್ಕಿಗಳ ಸಂಖ್ಯೆ

ಚಿಕ್ಕಮಗಳೂರು, ನ.23- ಮಳೆ ಕೊರತೆಯಿಂದ ನಗರದ ಸುತ್ತಮುತ್ತಲ ಕೆರೆಗಳಲ್ಲಿ ನೀರು ಕಡಿಮೆಯಾಗಿದ್ದು, ವಲಸೆ ಪಕ್ಷಿಗಳ ಸಂಖ್ಯೆಯೂ ಗೌಣವಾಗಿಯೇ ಇದೆ.ಆದರೆ, ಹಲವು ಅಪರೂಪದ ಪಕ್ಷಿಗಳು ಜಿಲ್ಲೆಯ ಕೆರೆಗಳು ಹಾಗೂ ಹಸಿರು ಗಿಡಗಳಲ್ಲಿ ಆಶ್ರಯ ಪಡೆದಿರುವುದು ಕಂಡುಬಂದಿದೆ. ಜಿಲ್ಲೆಯ ವೈಲ್ಡ್‌ ಕ್ಯಾಟ್‌-ಸಿ ಸಂಸ್ಥೆಯ ಪಕ್ಷಿ ವೀಕ್ಷಕ ಆಸಕ್ತರು ನಿನ್ನೆ ಬೆಳಿಗ್ಗೆ ನಗರದ ಹೊರವಲಯದ ಹೆಜ್ಜಿಗೇನಹಳ್ಳಿ, ದೇವಿಕೆರೆ, ಮಾಗಡಿ ಕೆರೆಗಳಿಗೆ ಪರಿಸರತಜ್ಞ ಡಿ.ವಿ. ಗಿರೀಶ್‌ ನೇತೃತ್ವದಲ್ಲಿ ತೆರಳಿ ವೀಕ್ಷಿಸಿದರು.

ಮಾಗಡಿ ಕೆರೆಯಲ್ಲಿ ಬಹುಸಂಖ್ಯೆಯಲ್ಲಿ ಬಣ್ಣದ ಕೊಕ್ಕರೆಗಳು ಕಂಡುಬಂದವು. ಜೊತೆಗೆ ಸ್ಪಾಟ್‌ ಬಿಲ್‌, ತೆರೆದ ಕೊಕ್ಕಿನ ಕೊಕ್ಕರೆ, ಗಾರ್ಗ್ಯಾನಿ ಹಕ್ಕಿಗಳು ಆಹಾರ ಅರಸುತ್ತಾ ಮುಳುಗಿ, ತೇಲುತ್ತಾ ಸಾಗುತ್ತಿದ್ದವು. ವಿಶೇಷವೆಂದರೆ, ಈ ಬಾರಿ ಗ್ರೀನ್‌ ನೆಕ್ಡ್‌ ಬಂಟಿಂಗ್‌, ಬ್ಲೂ ಥ್ರೋಟ್‌, ಬ್ಲೂ ವಿಂಗ್ಡ್‌ ಟೀಲ್‌, ಗ್ರೇಟರ್‌ ಸ್ಪಾಟೆಡ್‌ ಈಗಲ್‌, ನಾರ್ದರ್ನ್‌ ಶಾವಲರ್‌, ಗ್ರೇಟ್‌ ಶ್ಯಾಂಕ್‌, ಈಜಿಪ್ಟಿನ ಹದ್ದು, ಪ್ರಾಟಿನ್‌ಕೋಲ್‌ ಹಾಗೂ ಬಹು ಅಪರೂಪವಾಗಿ ಕಾಣಸಿಗುವ ಯೂರೋಪಿಯನ್‌ ರೋಲರ್‌ ಪಕ್ಷಿಗಳು ಕಂಡುಬಂದವು.

ಕೆರೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ನಾಮದ ಕೋಳಿ, ಕಪ್ಪು-ಬಿಳಿ ಮೇಟುಗಾಲು ಹಕ್ಕಿ, ಪ್ಲೋವರ್‌ಗಳು, ಬೆಳ್ಳಕ್ಕಿ, ನೀರುಕಾಗೆ ಮತ್ತು ಗ್ರೇ ಹೆರಾನ್‌ ಇದ್ದವು. ಕೆಲವು ಹಕ್ಕಿಗಳು ಹಿಮಾಲಯದಿಂದ ಇಲ್ಲಿಗೆ ಬಂದಿದ್ದರೆ, ಇನ್ನು ಕೆಲವು ಸ್ಥಳೀಯವಾಗಿಯೇ ವಲಸೆ ಬಂದವಾಗಿವೆ ಎಂದು ಗಿರೀಶ್‌ ವಿವರಣೆ ನೀಡಿದರು.

ಬಹುಮುಖ್ಯವಾಗಿ ಗಮನ ಸೆಳೆದ ಹಕ್ಕಿಗಳೆಂದರೆ ಗ್ರೀನ್‌ ನೆಕ್ಡ್‌ ಬಂಟಿಂಗ್‌ ಮತ್ತು ಯೂರೋಪಿಯನ್‌ ರೋಲರ್‌. ರಸ್ತೆಯಲ್ಲಿ ಕೆರೆಯ ಬಳಿ ಹೋಗುತ್ತಿದ್ದಾಗ ಕಂಡುಬಂದ ದೃಶ್ಯವೆಂದರೆ, ಗೀಜಿಗ ಹಕ್ಕಿಗಳ ಗುಂಪು ಹಸಿರು ಗಿಡವೊಂದರ ಸುತ್ತ ನೆರೆದು ಗಲಾಟೆ ಮಾಡುತ್ತಿದ್ದಾಗ, ಹಸಿರು ಹಾವೊಂದು ಆ ಹಕ್ಕಿಗಳನ್ನು ಕಬಳಿಸಲು ಹೊಂಚು ಹಾಕುತ್ತಿದ್ದದ್ದು.

ವಾತಾವರಣದ ಬಿಸಿಯಿಂದ ಚಳಿಗಾಲದಲ್ಲಿ ಕೆರೆಗಳಿಗೆ ಬಂದಿಳಿದು ತೇಲುತ್ತಾ ಇರುತ್ತಿದ್ದ ನೂರಾರು ಹಕ್ಕಿಗಳ ಗುಂಪು ಈ ಬಾರಿ ಯಾವ ಕೆರೆಯಲ್ಲೂ ಇರಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಬಣ್ಣದ ಕೊಕ್ಕರೆಗಳು ಕಂಡುಬಂದರೆ, ಉಳಿದ ಪಕ್ಷಿ ಪ್ರಭೇದಗಳು ಬೆರಳೆಣಿಕೆಯಷ್ಟು ಮಾತ್ರ ಕಂಡುಬಂದವು. ಪಕ್ಷಿ ವೀಕ್ಷಣೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಸ. ಗಿರಿಜಾಶಂಕರ, ಡಾ. ಸುಸಿತಾ, ಡಾ. ಸೂರ್ಯ ಹಾಗೂ ರಜತ್‌ ಭಾಗವಹಿಸಿದ್ದರು.

ಕಳೆದ 40 ವರ್ಷಗಳಿಂದ ಈ ತಂಡ ಚಳಿಗಾಲದಲ್ಲಿ ಪಕ್ಷಿ ವೀಕ್ಷಣೆ ಹಾಗೂ ಎಣಿಕೆಯಲ್ಲಿ ಭಾಗವಹಿಸುತ್ತಿದೆ. ಇತ್ತೀಚೆಗೆ ವಾತಾವರಣದ ಏರುಪೇರು, ಕೆರೆಗಳಲ್ಲಾಗುತ್ತಿರುವ ಬದಲಾವಣೆಗಳು, ಜಾಗತಿಕ ತಾಪಮಾನದ ಏರಿಕೆ ಹಾಗೂ ಕೆಲವು ಹಕ್ಕಿಗಳಿಗೆ ತಗುಲುವ ಕಾಯಿಲೆಗಳಿಂದ ವಲಸೆ ಬರುವ ಹಕ್ಕಿಗಳ ಸಂಖ್ಯೆ ಕುಸಿಯುತ್ತಿರಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ. ಕೆಲವು ಕಡೆ ನೀರುಹಕ್ಕಿಗಳು ಕೆರೆಗೆ ಬರುವ ಸಂದರ್ಭದಲ್ಲಿ ಅವುಗಳ ತಾತ್ಕಾಲಿಕ ಆವಾಸಸ್ಥಾನದಲ್ಲಾಗುತ್ತಿರುವ ಅಡಚಣೆಗಳು ಪಕ್ಷಿಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗಿರಬಹುದು ಎನ್ನಬಹುದು.

RELATED ARTICLES

Latest News