ನವದೆಹಲಿ,ಏ.26- ಎರಡನೆ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಅತ್ಯಂತ ಹೆಚ್ಚು ಶ್ರೀಮಂತ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಹೊರಹೊಮಿದ್ದಾರೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 88 ಸ್ಥಾನಗಳಲ್ಲಿ ಇಂದು ಚುನಾವಣಾ ನಡೆಯುತ್ತಿದ್ದು, ಪ್ರಮುಖ ಸ್ಪರ್ಧಿಗಳಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಹೇಮಾ ಮಾಲಿನಿ ಮತ್ತು ಅರುಣ್ ಗೋವಿಲ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಇದ್ದಾರೆ.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್‌ನ ಸ್ಪರ್ಧಿಗಳ ಸ್ವಯಂ ಪ್ರಮಾಣ ಪತ್ರಗಳ ವಿಶ್ಲೇಷಣೆಯ ಪ್ರಕಾರ, ಸ್ಟಾರ್ ಚಂದ್ರು ಎಂದು ಜನಪ್ರಿಯವಾಗಿರುವ ಕರ್ನಾಟಕ ಕಾಂಗ್ರೆಸ್ ನಾಯಕ ವೆಂಕಟರಮಣೇಗೌಡ ಅವರು 2 ನೇ ಹಂತದ ಮತದಾನದಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿರುವ ಗೌಡರು 622 ಕೋಟಿ ರೂ.ಗಳ ಆಸ್ತಿ ಘೋಷಿಸಿಕೊಂಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಹಾಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು 593 ಕೋಟಿ ಮೌಲ್ಯದ ಆಸ್ತಿಯೊಂದಿಗೆ ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಮಥುರಾ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿರುವ ಬಿಜೆಪಿ ಸಂಸದೆ ಹೇಮಾ ಮಾಲಿನಿ 278 ಕೋಟಿ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, 232 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಸಂಜಯ್ ಶರ್ಮಾ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ ಅವರ ಒಟ್ಟು ಆಸ್ತಿ ಮೌಲ್ಯ 217.21 ಕೋಟಿ ರೂ.ಗಳಾಗಿದೆ.
ಮೇಲಿನ ಐವರು ಅಭ್ಯರ್ಥಿಗಳು ಅತ್ಯಂತ ಶ್ರೀಮಂತ ಅಭ್ಯರ್ಥಿಗಳಾಗಿದ್ದರೆ ಈ ಕೆಳಗಿನ ಐವರು ಅಭ್ಯರ್ಥಿಗಳು ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಗಳಾಗಿದ್ದಾರೆ. ಮಹಾರಾಷ್ಟ್ರದ ನಾಂದೇಡ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲಕ್ಷ್ಮಣ್ ನಾಗರಾವ್ ಪಾಟೀಲ್ ಎರಡನೇ ಹಂತದಲ್ಲಿ ಅತಿ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಯಾಗಿದ್ದಾರೆ. ಅವರ ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಬಳಿ ಕೇವಲ 500 ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಪಾಟೀಲ್ ನಂತರ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ರಾಜೇಶ್ವರಿ ಕೆಆರ್ ಅವರು ಕೇರಳದ ಕಾಸರಗೋಡಿನಿಂದ ಸ್ಪರ್ಧಿಸಿದ್ದಾರೆ ಮತ್ತು ಅವರು 1,000 ಮೌಲ್ಯದ ಆಸ್ತಿ ಹೊಂದಿದ್ದರೆ, ಅಮರಾವತಿಯಿಂದ (ಎಸ್‌ಸಿ) ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿರುವ ಪಥ್ವಿಸಾವ್ರಾಟ್ ಮುಕಿಂದ್ರರಾವ್ ದೀಪವಂಶ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು ಒಟ್ಟು 1,400 ಆಸ್ತಿ ಹೊಂದಿದ್ದಾರೆ.
ರಾಜಸ್ಥಾನದ ಜೋಧ್‌ಪುರದಿಂದ ಸ್ಪರ್ಧಿಸಿರುವ ದಲಿತ ಕ್ರಾಂತಿ ದಳದ ನಾಯಕ ಶಹನಾಜ್ ಬಾನೊ 2,000 ಮೌಲ್ಯದ ಆಸ್ತಿ ಘೋಷಿಸಿದ್ದಾರೆ.ಕೇರಳದ ಕೊಟ್ಟಾಯಂನಿಂದ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ) ನಿಂದ ಕಣಕ್ಕಿಳಿದಿರುವ ವಿಪಿ ಕೊಚುಮೊನ್ 2,230 ಆಸ್ತಿಯೊಂದಿಗೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಶೂನ್ಯ ಆಸ್ತಿ ಅಭ್ಯರ್ಥಿಗಳು:
ಶೂನ್ಯ ಆಸ್ತಿ ಹೊಂದಿರುವ ಆರು ಅಭ್ಯರ್ಥಿಗಳಲ್ಲಿ ಕರ್ನಾಟಕದ ಪ್ರಕಾಶ್ ಆರ್‌ಎ ಜೈನ್, ರಾಮಮೂರ್ತಿ ಎಂ, ಮತ್ತು ರಾಜಾ ರೆಡ್ಡಿ ಸೇರಿದ್ದಾರೆ. ಶೂನ್ಯ ಆಸ್ತಿ ಹೊಂದಿರುವ ಇತರ ಮೂವರು ಅಭ್ಯರ್ಥಿಗಳು ಮಹಾರಾಷ್ಟ್ರದ ಕಿಶೋರ ಭೀಮರಾವ್ ಲಬಾಡೆ, ನಾಗೇಶ ಸಂಭಾಜಿ ಗಾಯಕವಾಡ ಮತ್ತು ಜ್ಞಾನೇಶ್ವರ ರಾವ್ಸಾಹೇಬ್ ಕಪಾಟೆ ಅವರಾಗಿದ್ದಾರೆ.