ಬೆಂಗಳೂರು,ನ.26- ನಾನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗಿಂತಲೂ ಚನ್ನಾಗಿ ಸಂವಿಧಾನ ಅರ್ಥ ಮಾಡಿಕೊಂಡಿದ್ದೇನೆ. ಬಾಬಾ ಸಾಹೇಬರ ಆಶಯದಂತೆ ನಡೆದುಕೊಳ್ಳುವವರು ನಾವು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಭಾರತದ ಮಾಜಿ ಪ್ರಧಾನ ಮಂತ್ರಿಗಳು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್ ಡಿ ದೇವೇಗೌಡರು ಮತ್ತಿತರ ನಾಯಕರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಹೊರಗೆ ಎಲ್ಲೋ ಮಾತಾಡಿದ್ದ ಗೃಹ ಸಚಿವರು ಕುಮಾರಸ್ವಾಮಿ ಅವರಿಗೆ ಸಂವಿಧಾನ ಗೊತ್ತಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ. ಸಂವಿಧಾನ ಗೊತ್ತಿದ್ದ ಕಾರಣಕ್ಕೆ ನಾನು ನನ್ನ ಕೈಗೆ ಸಿಕ್ಕ ದಾಖಲೆಯನ್ನು ಬಹಿರಂಗವಾಗಿ ಮಾಧ್ಯಮಗೋಷ್ಠಿಯನ್ನು ಕರೆದು ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹೇಳಿದ್ದೆ. ಆದರೆ ನೀವೇನು ಮಾಡುತ್ತಿದ್ದೀರಿ? ಸಿಕ್ಕಿದ ದಾಖಲೆ ಮೇರೆಗೆ ತಪ್ಪಿತಸ್ಥ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸದೆ ಆರೋಪ ಮಾಡಿದ ಪ್ರತಿಪಕ್ಷ ನಾಯಕರನ್ನು, ಸುದ್ದಿಯನ್ನು ಬಿತ್ತರಿಸಿದ ಮಾಧ್ಯಮ ವರದಿಗಾರರಿಗೆ ನೋಟಿಸ್ ನೀಡುವುದು ಸಂವಿಧಾನ ಪಾಲನೆಯೇ? ಎಂದು ಸಚಿವ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಜಗತ್ತಿಗೆ ಮಾದರಿಯಾದ ಸಂವಿಧಾನ ನಮ್ಮದು. ಈ ಕಾರ್ಯಕ್ರಮ ನಮ್ಮೆಲ್ಲರ ಜವಾಬ್ದಾರಿ. ಸಂವಿಧಾನದ ಬಗ್ಗೆ ನಾವಿಟ್ಟಿರುವ ಗೌರವವನ್ನು ತೋರಿಸುವ ಕಾರ್ಯಕ್ರಮ. ಈ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬೇಕಾದರೆ ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂದು ದೇವೇಗೌಡರು ಹೇಳಿದ್ದಾರೆ ಎಂದರು ಅವರು.
ಕಾಂಗ್ರೆಸ್ ನಾಯಕರು ಯಾವಗಲೂ ಸಂವಿಧಾನ ಪುಸ್ತಕವನ್ನ ಜತೆಯಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಹೇಳುತ್ತಾರೆ. ನಾವು ದಲಿತರ ಪರ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ಮಾಡ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಯಾರ ನಾಯಕತ್ವದಲ್ಲಿ ಆಚರಿಸಬೇಕು ಅನ್ನುವ ಪೈಪೋಟಿ ಇತ್ತು. ಅಧಿಕಾರ ಇಲ್ಲದಾಗ ಅಹಿಂದ ನೆನಪಾಗುತ್ತದೆ, ಅಧಿಕಾರ ಇದ್ದಾಗ ಅಹಿಂದ ವರ್ಗ ನೆನಪಾಗಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.
ದಲಿತ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಮಾಡಿಕೊಳ್ಳುವುದಕ್ಕೆ, ಪರಸ್ಪರ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದೆ ಕಾಂಗ್ರೆಸ್. ನಮಗೆ ಸಿಕ್ಕಿರುವ ಕಡಿಮೆ ಅವಧಿಯಲ್ಲಿ ಎಲ್ಲಾ ವರ್ಗದ ಜನರನ್ನು ಗುರುತಿಸುವ ಕೆಲಸ ಮಾಡಿದ್ದೇವೆ. ಮೀಸಲಾತಿ ಇಲ್ಲದಿದ್ದಾಗಲೇ ಹಾಸನದಲ್ಲಿ ದೇವೇಗೌಡರು ಅಂದು ದಲಿತ ಯುವಕನನ್ನು ಜಿಪಂ ಅಧ್ಯಕ್ಷರಾಗಿ ಮಾಡಿದ್ದರು ಎಂದ ಅವರು; ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನ ಬಗ್ಗೆ ಹತ್ತು ದಿನಗಳಿಂದ ನಾನು ಮಾತನಾಡಿಲ್ಲ. ಅಸಿಸ್ಟೆಂಟ್ ಎಂಜಿನಿಯರ್ ಗಳ ನೇಮಕದಲ್ಲಿ ಅಕ್ರಮದ ಬಗ್ಗೆ ಹೇಳಿದಾಗ ದಾಖಲೆಗಳನ್ನ ತನ್ನಿ ಅಂತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ವಾಟ್ಸಾಪ್ ಚಾಟ್ನಲ್ಲಿ ಕಂಡು ಬಂದಿರುವ ಅಂಶಗಳ ಬಗ್ಗೆ ಪ್ರಸ್ತಾಪಿಸಿ, ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿ ಎಂದು ಒತ್ತಾಯ ಮಾಡಿದ್ದೆ. ಆದರೆ, ನಮ್ಮ ಮುಖ್ಯಮಂತ್ರಿಗಳು ತನಿಖೆ ನಡೆಸದೆಯೇ ಅದೇ ದಿನವೇ ಸಂಬಂಧಿತ ಅಧಿಕಾರಿಗೆ ಕ್ಲೀನ್ಚಿಟ್ ಕೊಟ್ಟಿದ್ದರು. ಪೊಲೀಸರು ನನಗೆ ನೋಟಿಸ್ ಕೊಟ್ಟಿಲ್ಲ, ವಿವರಣೆ ಕೇಳಲು ಬಂದಿದ್ದರು. ಅದನ್ನು ಇಟ್ಟುಕೊಂಡು ಸಂವಿಧಾನ ಗೊತ್ತಿದ್ದರೆ ನೋಟಿಸ್ ಗೆ ಉತ್ತರ ನೀಡಬೇಕಿತ್ತು ಅಂತಾರೆ. ಆದರೆ ನಾನು ಗೃಹ ಸಚಿವರಿಗಿಂತಲೂ ಚೆನ್ನಾಗಿ ಸಂವಿಧಾನದ ಬಗ್ಗೆ ಅರ್ಥ ಮಾಡ್ಕೊಂಡಿದ್ದೇನೆ. ನೀವು ಸಂವಿಧಾನದ ಬಗ್ಗೆ ಚೆನ್ನಾಗಿ ಮಾತನಾಡ್ತೀರಲ್ಲಾ, ನೀವು ಶಾಸಕರಾಗಿದ್ದಾಗ ಪಿಎಸ್ಐ ಹಗರಣದ ವಿಚಾರದಲ್ಲಿ ನೋಟಿಸ್ಗೆ ಏನು ಉತ್ತರ ಕೊಟ್ಟಿದ್ದೀರಿ ಎನ್ನುವುದನ್ನು ಒಮ್ಮೆ ತೆಗೆದುನೋಡಿ ಎಂದು ಕುಮಾರಸ್ವಾಮಿ ಅವರು ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.
ಬಾಬಾ ಸಾಹೇಬರು ಹೇಳಿದ್ದಂತೆ ಸಂವಿಧಾನಕ್ಕೆ ಗೌರವ ಕೊಡುವ ಕೆಲಸ ಮಾಡುತ್ತಿರುವುದು, ಅದರಂತೆ ನಡೆದುಕೊಳ್ಳುವುದು ನಾವು. ಏನೂ ಇಲ್ಲದಿದ್ದ ಡಾ.ಅನ್ನದಾನಿ ಅವರನ್ನು, ಆಶ್ರಯ ಮನೆಯಲ್ಲಿ ವಾಸವಿದ್ದ ತಿಮ್ಮರಾಯಪ್ಪರಂತಹ ದುರ್ಬಲ ದಲಿತರನ್ನು ಶಾಸಕರನ್ನಾಗಿ ಮಾಡಿದ್ದು ಇದೇ ಜೆಡಿಎಸ್. ಪ್ರಿಯಾಂಕ ಖರ್ಗೆ ಅವರೇ ಲಘುವಾಗಿ ಮಾತನಾಡೋದನ್ನು ನಿಲ್ಲಿಸಬೇಕು ಎಂದು ಸಚಿವರು ಎಚ್ಚರಿಸಿದರು.
ಆಶಾ ಕಾರ್ಯಕರ್ತೆಯರು ಚಿಕ್ಕಚಿಕ್ಕ ಮಕ್ಕಳೊಂದಿಗೆ ಪ್ರತಿಭಟನೆ ಕೂತಿದ್ದಾರೆ. ಮುಖ್ಯಮಂತ್ರಿಗಳು ಫೋನ್ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಬೇಡಿಕೆ ಈಡೇರಿಸುತ್ತೇನೆ ಎನ್ನುತ್ತಾರೆ. ಭಾರತ್ ಜೋಡೋ ಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಪುಢಾರಿಗಳಿಗೆ ಪ್ರತಿ ಪಂಚಾಯತ್ಗೆ 10 ಲಕ್ಷದಂತೆ ₹1000 ಕೋಟಿ ಕೊಡುವುದಕ್ಕೆ ಯಾವ ಅಧಿಕಾರಿಗಳ ಜತೆ ಚರ್ಚೆ ಮಾಡಿದಿರಿ? ಅಷ್ಟು ಹಣ ಕೊಡಿ ಎಂದು ಯಾವ ಅಧಿಕಾರಿ ಸಲಹೆ ಕೊಟ್ಟರು? ಅಲ್ಲಿ ₹1000 ಕೋಟಿ ಕೊಡಲು ಶಕ್ತಿ ಇರುವವರು ಆಶಾ ಕಾರ್ಯಕರ್ತೆಯರಿಗೆ ನಿಮ್ಮ ಯೋಗ್ಯತೆಗೆ ₹350 ಕೋಟಿ ಕೊಡಲು ಸಾಧ್ಯ ಇಲ್ಲವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
2018ರಲ್ಲಿ ರೈತರ ಸಾಲದ ಮನ್ನಾ ನಡುವೆಯೂ ಆಶಾ ಕಾರ್ಯಕರ್ತೆಯರ ಗೌರವಧನವನ್ನು ₹1,000 ಹೆಚ್ಚಳ ಮಾಡಿದ್ದೆ. ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕು ಎಂದು ಮುಖ್ಯಮಂತ್ರಿಗಳು ಕೇಳುತ್ತಾರೆ. ನನ್ನ ಸಾಕ್ಷಿಗುಡ್ಡೆ ಇರಲಿ, ನಿಮ್ಮ ಸಾಕ್ಷಿಗುಡ್ಡೆ ಎಲ್ಲಿ? ಎಂದು ಸಚಿವರು ಪ್ರಶ್ನಿಸಿದರು.
ಮಾಜಿ ಶಾಸಕ, ಜೆಡಿಎಸ್ ರಾಜ್ಯ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಡಾ.ಕೆ. ಅನ್ನದಾನಿ, ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಾತನಾಡಿದರು.
ಮಾಜಿ ಸಚಿವೆ ಲೀಲಾದೇವಿ ಪ್ರಸಾದ್, ಸಂಸದರಾದ ಎಂ.ಮಲ್ಲೇಶ್ ಬಾಬು, ಶಾಸಕರುಗಳಾದ ಸಿ.ಎನ್.ಬಾಲಕೃಷ್ಣ, ಎ.ಮಂಜು, ಮಾಜಿ ಶಾಸಕರುಗಳಾದ ಹೆಚ್.ಕೆ. ಕುಮಾರಸ್ವಾಮಿ, ಡಾ.ಶ್ರೀನಿವಾಸ ಮೂರ್ತಿ, ನಿಸರ್ಗ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಎ.ಪಿ. ರಂಗನಾಥ್, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ರಶ್ಮಿ ರಾಮೇಗೌಡ, ಸೇರಿದಂತೆ ಮಾಜಿ ಶಾಸಕರುಗಳು, ಜಿಲ್ಲಾಧ್ಯಕ್ಷರುಗಳು ಸೇರಿದಂತೆ ಹಲವು ಮುಖಂಡರುಗಳು ಪಾಲ್ಗೊಂಡಿದ್ದರು.
