ಬೆಂಗಳೂರು,ನ.26- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು ಮತ್ತು ಅವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವರ್ಗಾಯಿಸುವಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರು 2026ರ ನವೆಂಬರ್ 25ರಂದು ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಕೆಪಿಎಸ್ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದರೂ, ಅವುಗಳನ್ನು ಯಾವುದೇ ವಿಳಂಬವಿಲ್ಲದೆ ಎಸ್ಐಟಿಗೆ ಹಸ್ತಾಂತರಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಸೂಚಿಸಲಾಗಿದೆ.
ಹೈಕೋರ್ಟ್ನ ಮಹತ್ವದ ನಿರ್ದೇಶನ
ಕೆಪಿಎಸ್ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಕ್ರಿಮಿನಲ್ ಅರ್ಜಿ ಸಂಖ್ಯೆ 11992/2026 ಸೇರಿದಂತೆ 11362/2026, 11874/2026, 22184/2026 ಮತ್ತು 23448/2026ರ ವಿಚಾರಣೆ ವೇಳೆ ನ್ಯಾಯಾಲಯವು ನವೆಂಬರ್ 21ರಂದು ಮಹತ್ವದ ನಿರ್ದೇಶನ ನೀಡಿತ್ತು. ಹೈಕೋರ್ಟ್ ತನ್ನ ಆದೇಶದ 9ನೇ ಕಂಡಿಕೆಯಲ್ಲಿ, ಕೆಪಿಎಸ್ಸಿ ನಡೆಸಿದ ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು ಅಥವಾ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರೂ, ಅವುಗಳನ್ನು ವಿಳಂಬವಿಲ್ಲದೆ ಎಸ್ಐಟಿ ತನಿಖೆಗೆ ವರ್ಗಾಯಿಸಬೇಕು ಎಂದು ಸ್ಪಷ್ಟಪಡಿಸಿತ್ತು.
ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಯ ಸೆಕ್ಷನ್ 66(2)ರ ಅಡಿಯಲ್ಲಿ ಹಂಚಿಕೊಳ್ಳುವ ಮಾಹಿತಿಯ ಆಧಾರದ ಮೇಲೆ ಮುಂದೆ ದಾಖಲಾಗಬಹುದಾದ ಪ್ರಕರಣಗಳೂ ಈ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಈಗಾಗಲೇ ಎಸ್ಐಟಿ ರಚನೆ, ಪುನರ್ರಚನೆ
ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 78/2026 ಮತ್ತು 89/2026ನೇ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಅಲ್ಲದೆ, ನವೆಂಬರ್ 4ರಂದು ಸರ್ಕಾರ ಎಸ್ಐಟಿಯನ್ನು ಪುನರ್ರಚಿಸಿ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿತ್ತು. ಎಸ್ಐಟಿಯ ಮುಖ್ಯಸ್ಥರಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರ ಅವರನ್ನು ನೇಮಕ ಮಾಡಲಾಗಿದ್ದು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಂಡದ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಬೆಂಗಳೂರಿನ ಕಮಾಂಡ್ ಸೆಂಟರ್ನ ಉಪ ಪೊಲೀಸ್ ಆಯುಕ್ತೆ ಕ್ಷಮಾ ಮಿಶ್ರಾ ಕೂಡ ತಂಡದಲ್ಲಿದ್ದಾರೆ.
ಇದಕ್ಕೂ ಮುನ್ನ ಎಸ್ಐಟಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 2(1)(u)ರ ಅಡಿಯಲ್ಲಿ ಪೊಲೀಸ್ ಠಾಣೆಯೆಂದು ಘೋಷಿಸಲಾಗಿತ್ತು. ಅಲ್ಲದೆ, ಕಲಂ 193ರ ಅಡಿಯಲ್ಲಿ ಸಂಬಂಧಪಟ್ಟ ಸಕ್ಷಮ ನ್ಯಾಯಾಲಯಗಳಿಗೆ ಪೊಲೀಸ್ ವರದಿ ಸಲ್ಲಿಸಲು ಎಸ್ಐಟಿ ತನಿಖಾಧಿಕಾರಿಗಳಿಗೆ ಅಧಿಕಾರ ನೀಡಲಾಗಿತ್ತು.
ರಾಜ್ಯಾದ್ಯಂತದ ಪ್ರಕರಣಗಳು ಎಸ್ಐಟಿ ವ್ಯಾಪ್ತಿಗೆ
ಸರ್ಕಾರದ ನವೆಂಬರ್ 25ರ ಪತ್ರದ ಪ್ರಕಾರ, ಇನ್ನು ಮುಂದೆ ಕೆಪಿಎಸ್ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದ ಯಾವುದೇ ಜಿಲ್ಲೆ ಅಥವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳೂ ಎಸ್ಐಟಿ ತನಿಖೆಯ ವ್ಯಾಪ್ತಿಗೆ ಬರಲಿವೆ. ಈಗಾಗಲೇ ದಾಖಲಾಗಿರುವ ಪ್ರಕರಣಗಳ ಜೊತೆಗೆ ಮುಂದೆ ದಾಖಲಾಗುವ ಪ್ರಕರಣಗಳನ್ನೂ ಎಸ್ಐಟಿಗೆ ಹಸ್ತಾಂತರಿಸಬೇಕಾಗಿದೆ. ಇದರಿಂದ ನೇಮಕಾತಿ ಅಕ್ರಮಗಳ ತನಿಖೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ನಡೆಯುವ ಬದಲು ಒಂದೇ ವಿಶೇಷ ತನಿಖಾ ತಂಡದ ಅಡಿಯಲ್ಲಿ ನಡೆಯಲಿದೆ.
ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ಕುರಿತು ಇ.ಡಿ. ಹಂಚಿಕೊಳ್ಳುವ ಮಾಹಿತಿಯ ಆಧಾರದ ಮೇಲೆ ದಾಖಲಾಗುವ ಪ್ರಕರಣಗಳೂ ಎಸ್ಐಟಿ ತನಿಖೆಗೆ ಒಳಪಡಲಿರುವುದು ಈ ಆದೇಶದ ಮತ್ತೊಂದು ಪ್ರಮುಖ ಅಂಶವಾಗಿದೆ. ಒಟ್ಟಿನಲ್ಲಿ, ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ತನಿಖೆಯನ್ನು ರಾಜ್ಯಾದ್ಯಂತ ಏಕೀಕೃತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಹೈಕೋರ್ಟ್ ನಿರ್ದೇಶನದ ಅನುಷ್ಠಾನಕ್ಕೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದೆ.
