Homeರಾಜ್ಯಸಿಎಂ ಡಿಕೆಶಿ ನಿವಾಸ ಮತ್ತು ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ಸಿಎಂ ಡಿಕೆಶಿ ನಿವಾಸ ಮತ್ತು ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ಬೆಂಗಳೂರು, ನ.27- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸ ಮತ್ತು ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿಯ ಬಾಲಾಜಿ ನಗರದ ಪಿಜಿಯೊಂದರಲ್ಲಿ ವಾಸವಾಗಿದ್ದ ಕಾರ್ತಿಕ್ (28) ಬಂಧಿತ ಆರೋಪಿ. ಈತ ಆಸ್ಪತ್ರೆಯೊಂದರಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡಿಕೊಂಡಿದ್ದ.
ಭಗವಂತರಾಯನ್ ಎಂಬುವವರು ತಮ ಯಾತ್ರಿ ಆ್ಯಪ್ ಮೂಲಕ ಆಟೋ ಚಾಲನೆ ಮಾಡುತ್ತಿದ್ದರು. ಕಾರ್ತಿಕ್ ಎಂಬಾತ ಸದಾಶಿವನಗರದಿಂದ ಆರ್ಆರ್ ನಗರಕ್ಕೆ ತೆರಳಲು ಆಟೋ ಬುಕ್ ಮಾಡಿದ. ಆಟೋ ಬುಕ್ ಮಾಡಿದ ಕಾರ್ತಿಕ್ ಚಾಲಕನಿಗೆ ಪಿಕಪ್ ಲೊಕೇಷನ್ ಕಳುಹಿಸಿದ್ದು, ಅದು ಸಿಎಂ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸ ಎಂದು ತೋರಿಸಿತು. ಹಾಗಾಗಿ ಕಳುಹಿಸಿದ ಲೊಕೇಷನ್ಗೆ ಬಂದ ಆಟೋ ಚಾಲಕ ಬುಕ್ ಮಾಡಿದ ವ್ಯಕ್ತಿಗೆ ಕರೆ ಮಾಡಿದ.

ಕರೆ ಸ್ವೀಕರಿಸಿದ ವ್ಯಕ್ತಿ ನಾನು ಸಿಎಂ ಮನೆಯಲ್ಲಿದ್ದೇನೆ. ಬ್ಯಾರಿಕೇಡ್ ಬಳಿ ಪೊಲೀಸರು ಇದ್ದಾರೆ. ಅವರಿಗೆ ಫೋನ್ ಕೊಡಿ ಎಂದು ಹೇಳಿದ್ದಾನೆ. ಆತ ಹೇಳಿದಂತೆ ಆಟೋ ಚಾಲಕ ಬ್ಯಾರಿಕೇಡ್ ಬಳಿ ಇದ್ದ ಪೊಲೀಸರಿಗೆ ಫೋನ್ ಕೊಟ್ಟಿದ್ದಾರೆ. ಪೊಲೀಸರು ಕರೆ ಸ್ವೀಕರಿಸುತ್ತಿದ್ದಂತೆ ಮಾತನಾಡಿದ ಅಪರಿಚಿತ ವ್ಯಕ್ತಿ ಸಿಎಂ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿ ಕರೆ ಕಟ್ ಮಾಡಿದ್ದಾನೆ. ಆಗ ಪೊಲೀಸರು ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ತಕ್ಷಣ ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಇನ್ನಿತರ ಅಧಿಕಾರಿಗಳ ತಂಡಗಳು ಸಿಎಂ ನಿವಾಸ ಮತ್ತು ವಿಧಾನಸೌಧದ ಸುತ್ತಮುತ್ತ ತಪಾಸಣೆ ನಡೆಸಿದಾಗ ಯಾವುದೇ ಬಾಂಬ್ ಕಂಡುಬರದ ಕಾರಣ ಇದು ಒಂದು ಹುಸಿ ಕರೆ ಎಂದು ನಿಟ್ಟುಸಿರುಬಿಟ್ಟಿದ್ದಾರೆ. ನಂತರ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

RELATED ARTICLES

Latest News