Homeರಾಜ್ಯಕ್ಷೇತ್ರ ಮರು ವಿಂಗಡಣೆ ಮತ್ತು ಮಹಿಳಾ ಮೀಸಲು ಮಸೂದೆಗೆ ಜೆಡಿಎಸ್ ಬೆಂಬಲ

ಕ್ಷೇತ್ರ ಮರು ವಿಂಗಡಣೆ ಮತ್ತು ಮಹಿಳಾ ಮೀಸಲು ಮಸೂದೆಗೆ ಜೆಡಿಎಸ್ ಬೆಂಬಲ

ನವದೆಹಲಿ, ನ. 28-ಮಹಿಳಾ ಮೀಸಲು ವಸೂದೆ ಹಾಗೂ ಕ್ಷೇತ್ರ ಮರು ವಿಂಗಡಣೆ ಮಸೂದೆಗಳಿಗೆ ಜಾತ್ಯತೀತ ಜನತಾದಳ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಕಳೆದ ಮೂರು ದಶಕಗಳಿಂದ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ ನೀಡಬೇಕು ಎನ್ನುವ ಕನಸು ನೆನೆಗುದಿಗೆ ಬಿದ್ದಿತ್ತು. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಮಸೂದೆ ಧ್ವನಿಮತದಿಂದ ಅಂಗೀಕಾರವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.

ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿಗಳಾಗಿದ್ದಾಗ ಮಹಿಳಾ ಮೀಸಲು ಮಸೂದೆಯನ್ನು ಸಂಸತ್ತಿನಲ್ಲಿ ಮಡಿಸಲಾಗಿತ್ತು. ಆದರೆ ಅಂದು ಸಂಯುಕ್ತರಂಗದ ಮಿತ್ರಪಕ್ಷಗಳೇ ಒಪ್ಪಿಗೆ ನೀಡದಿದ್ದ ಪರಿಣಾಮವಾಗಿ ಆ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಲೋಕಸಭೆಯಲ್ಲಿ ಬಿದ್ದುಹೋಗಿತ್ತು. 30 ವರ್ಷಗಳ ನಂತರ ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಬಂದ ಮೇಲೆ ಐತಿಹಾಸಿಕ ಮಹಿಳಾ ಮೀಸಲು ಮಸೂದೆಯು ಸಂಸತ್ತಿನಲ್ಲಿ ಮಂಡನೆ ಆಗುತ್ತಿದ್ದು, ಅದಕ್ಕೆ ತಮ್ಮ ನೇತೃತ್ವದ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಕುಮಾರಸ್ವಾಮಿ ಅವರು ಘೋಷಿಸಿದರು.

ಹಾಗೆಯೇ ಕ್ಷೇತ್ರ ಮರು ವಿಂಗಡಣೆ ಮಸೂದೆಗೆ ತಮ್ಮ ಪಕ್ಷ ಬೆಂಬಲ ನೀಡುತ್ತಿದ್ದು, ಹಾಲಿ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳು ಮಸೂದೆ ಅಂಗೀಕಾರವಾಗಿ ಅನುಷ್ಠಾನಕ್ಕೆ ಬಂದ ನಂತರ 56 ಲೋಕಸಭಾ ಕ್ಷೇತ್ರಗಳು ಆಗಲಿವೆ. ಒಟ್ಟಾರೆಯಾಗಿ ಶೇ. 50ರಷ್ಟು ಲೋಕಸಭಾ ಕ್ಷೇತ್ರಗಳು ಕರ್ನಾಟಕದಲ್ಲಿ ಹೆಚ್ಚಾಗಲಿವೆ. ಇದರಿಂದ ಲೋಕಸಭೆಯಲ್ಲಿ ಕನ್ನಡಿಗರ ಧ್ವನಿಯು ಕ್ಷೀಣವಾಗುವುದಿಲ್ಲ ಹಾಗೂ ಕನ್ನಡಿಗರ ಉಪಸ್ಥಿತಿ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಸಚಿವರು ಹೇಳಿದರು.

ಏನ್ಡಿಎ ಮೈತ್ರಿಕೂಟದ ಭಾಗವಾಗಿ ನಾವು ಕರ್ನಾಟಕದ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಕ್ಷೇತ್ರ ಮರುವಿಂಗಡಣೆ ಮಸೂದೆಯಿಂದ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ. ಲೋಕಸಭೆಯಲ್ಲಿ ಕನ್ನಡಿಗರ ಪ್ರಾತಿನಿಧ್ಯ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಅವರು ಹೇಳಿದರು.

ಈ ಮಸೂದೆ ಅನುಷ್ಠಾನಕ್ಕೆ ಬಂದ ನಂತರ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯ ಕಡಿಮೆ ಆಗುತ್ತದೆ ಎಂಬುದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಈ ಎಲ್ಲಾ ರಾಜ್ಯಗಳ ಪ್ರಸ್ತುತ ಇರುವ ಲೋಕಸಭಾ ಕ್ಷೇತ್ರಗಳು ದುಪ್ಪಟ್ಟು ಆಗಲಿವೆ. ಅಂದರೆ ಶೇಕಡ 50ರಷ್ಟು ಹೆಚ್ಚಾಗಲಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.

ಕ್ಷೇತ್ರ ಮರು ವಿಂಗಡಣೆ ಮಸೂದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅನಗತ್ಯವಾಗಿ ಭಾರತವನ್ನು ಗೊಂದಲಕ್ಕೆ ದೂಡುತ್ತಿದೆ. ಅಲ್ಲದೆ ಮಹಿಳಾ ಮೀಸಲು ಮಸೂದೆಯ ಬಗ್ಗೆಯೂ ಸ್ಪಷ್ಟವಾದ ನಿಲುವನ್ನು ಹೊಂದಿಲ್ಲ. ರಾಷ್ಟ್ರದ ಸಮಸ್ತ ಮಹಿಳೆಯರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮುಕ್ತ ಮನಸ್ಸಿನಿಂದ ಈ ಮಸೂದೆಗಳನ್ನು ಬೆಂಬಲಿಸಬೇಕು. ಇಲ್ಲವಾದರೆ ರಾಷ್ಟ್ರದ ಜನರು ಅವರನ್ನು ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ರಾಷ್ಟ್ರದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಪರಿವರ್ತನಾತ್ಮಕ ಹೆಜ್ಜೆಗಳನ್ನು ಇರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಮುಕ್ತಕಂಠದಿಂದ ಅಭಿನಂದಿಸುತ್ತೇನೆ. ಇಂದು ನಡೆದ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮತ್ತು ಕ್ಷೇತ್ರ ಮರುವಿಂಗಡನೆ ಮಸೂದೆಯನ್ನು ಮತ್ತೊಮ್ಮೆ ಸಂಸತ್ತಿನಲ್ಲಿ ಮಂಡಿಸಲು ನಿರ್ಧಾರ ಕೈಗೊಳ್ಳಲಾಯಿತು. ಎನ್ಡಿಎ ಮೈತ್ರಿಕೂಟದ ಭಾಗವಾಗಿ ಹಾಗೂ ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ನಾವು ಈ ಮಸೂದೆಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.

ಮುಖ್ಯವಾಗಿ ಕ್ಷೇತ್ರ ಮರು ವಿಂಗಡಣೆ ಮಸೂದೆಯಿಂದ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ. ಕೆಲವು ಪಕ್ಷಗಳು ನಿರಾಧಾರವಾಗಿ ಜನತೆಗೆ ತಪ್ಪು ಮಾಹಿತಿ ನೀಡುತ್ತಾ ಈ ಮಸೂದೆ ಬಗ್ಗೆ ಇಲ್ಲಸಲ್ಲದ ಅಸತ್ಯಗಳನ್ನು ಹರಡುತ್ತಿವೆ. ದಕ್ಷಿಣದ ರಾಜ್ಯಗಳು ಸೇರಿದಂತೆ ರಾಷ್ಟ್ರದ ಎಲ್ಲಾ ರಾಜ್ಯಗಳ ಪ್ರಸ್ತುತ ಲೋಕಸಭಾ ಕ್ಷೇತ್ರಗಳ ಪ್ರಮಾಣದಲ್ಲಿ ಶೇಕಡ 50ರಷ್ಟು ಕ್ಷೇತ್ರಗಳು ಹೆಚ್ಚಾಗಲಿವೆ ಎಂದು ಸಚಿವರು ತಿಳಿಸಿದರು.

ಅಲ್ಲದೆ ವಿನಾಕಾರಣ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರಾಷ್ಟ್ರಕ್ಕೆ ಉತ್ತರ ನೀಡಬೇಕಾದ ಅಗತ್ಯವಿದೆ. ಅಂತಹ ಮುಜುಗರ ಪರಿಸ್ಥಿತಿಯನ್ನು ಎದುರಿಸು ಬದಲು ಮುಕ್ತ ಮನಸ್ಸಿನಿಂದ ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗಳಿಗೆ ಎಲ್ಲಾ ಪಕ್ಷಗಳು ಸರ್ವ ಸಮ್ಮತವಾಗಿ ಬೆಂಬಲ ನೀಡಲಿ ಎಂದು ಒತ್ತಾಯಿಸುವುದಾಗಿ ಅವರು ಪ್ರಶ್ನೆ ಒಂದಕ್ಕೆ ಉತ್ತರ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ರಾಮ್ ಮೋಹನ್ ನಾಯ್ಡು, ಪೆಮ್ಮಸಾನಿ ಚಂದ್ರಶೇಖರ್, ಲೋಕಸಭೆಯಲ್ಲಿನ ಟಿಡಿಪಿ ನಾಯಕ ಲಾವು ಶ್ರೀಕೃಷ್ಣ ದೇವರಾಯಲು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

JDS Support to Delimitation and Women’s Reservation Bill

RELATED ARTICLES

Latest News