ಕೊಚ್ಚಿ, ನ.27- ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿರುವ ಕೇರಳದ ಯುವ ಪ್ರತಿಭೆ ಬಾಲಕನೊಬ್ಬ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗುವ ಅವಕಾಶ ಪಡೆದಿದ್ದಾರೆ. ಈ ಅಪರೂಪದ ಕ್ಷಣವನ್ನು ನೆನೆದು ರಾಹುಲ್ ದಿ ರಾಕ್ಸ್ಟಾರ್ ಎಂದೇ ಪರಿಚಿತರಾಗಿರುವ ರಾಹುಲ್ ಜಾನ್ ಅಜು ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಇನ್ನೂ ಈ ಕ್ಷಣವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಚಿಕ್ಕ ಮಗುವಾಗಿದ್ದಾಗ ಕೇವಲ ಮೋಜಿಗಾಗಿ ವಿಡಿಯೋಗಳನ್ನು ಮಾಡುತ್ತಿದ್ದ ನಾನು, 17ನೇ ವಯಸ್ಸಿಗೆ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ರಾಹುಲ್ ಬರೆದುಕೊಂಡಿದ್ದಾರೆ.
ಜೀವನ ನನಗೆ ಇಂತಹ ಅವಕಾಶಗಳನ್ನು ನೀಡಿದೆ. ಇನ್ನೂ ಕಲಿಯುವುದು ಬಹಳಷ್ಟಿದೆ, ಸಾಧಿಸುವುದು ಇನ್ನೂ ಹೆಚ್ಚಿದೆ. ಈ ಪ್ರಯಾಣದಲ್ಲಿ ಜೊತೆಯಾದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿರುವ ಅವರು, ಈ ಹಂತದವರೆಗೆ ಬರಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಕೇರಳದ ಕೊಚ್ಚಿಯ ರಾಹುಲ್ ಜಾನ್ ಅಜು ಉದ್ಯಮಿ, ಡೆವಲಪರ್ ಮತ್ತು ಭಾಷಣಕಾರರಾಗಿ ಗುರುತಿಸಿಕೊಂಡಿದ್ದಾರೆ. ಎಐ ಕಿಡ್ ಆಫ್ ಇಂಡಿಯಾ ಎಂದೇ ಪ್ರಸಿದ್ಧರಾಗಿರುವ ಅವರು ಚಿಕ್ಕ ವಯಸ್ಸಿನಿಂದಲೇ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ಸ್ವಯಂ ಕಲಿಕೆಯ ಮೂಲಕ ತಂತ್ರಜ್ಞಾನದ ವಿವಿಧ ವಿಷಯಗಳನ್ನು ಅಭ್ಯಾಸ ಮಾಡಿರುವ ರಾಹುಲ್ ಅವರು ಎಐ ರೀಲ್ಮ್ ಟೆಕ್ನಾಲಜಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ತಂತ್ರಜ್ಞಾನವನ್ನು ಕೇವಲ ಕಲಿಯುವುದಷ್ಟೇ ಅಲ್ಲದೆ, ಇತರರಿಗೂ ಅದರ ಜ್ಞಾನ ತಲುಪಿಸಬೇಕು ಎಂಬ ಉದ್ದೇಶದಿಂದ ಉಚಿತ ಎಐ ಶಿಕ್ಷಣ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದಾರೆ.
ರಾಹುಲ್ ಅವರ ಪ್ರಮುಖ ಪ್ರಯತ್ನಗಳಲ್ಲಿ ಥಿಂಕ್ ಕ್ರಾಫ್ಟ್ ಅಕಾಡೆಮಿ ಮೂಲಕ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಕೃತಕ ಬುದ್ಧಿಮತ್ತೆಯ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶ ಹೊಂದಿದ್ದಾರೆ. ಇಂದಿನ ದಿನಗಳಲ್ಲಿ ಎಐ ತಂತ್ರಜ್ಞಾನ ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಯುವಜನರಿಗೆ ಎಐ ಕುರಿತು ಆರಂಭಿಕ ಹಂತದಲ್ಲೇ ಜ್ಞಾನ ನೀಡುವುದು ಅಗತ್ಯ ಎಂಬ ನಿಟ್ಟಿನಲ್ಲಿ ರಾಹುಲ್ ಕೆಲಸ ಮಾಡುತ್ತಿದ್ದಾರೆ.
