Homeರಾಜ್ಯಮಹಿಳಾ ಮೀಸಲಾತಿ-ಕ್ಷೇತ್ರ ಮರುವಿಂಗಡಣೆ ತಳುಕು ಏಕೆ? ಖರ್ಗೆ ಪ್ರಶ್ನೆ

ಮಹಿಳಾ ಮೀಸಲಾತಿ-ಕ್ಷೇತ್ರ ಮರುವಿಂಗಡಣೆ ತಳುಕು ಏಕೆ? ಖರ್ಗೆ ಪ್ರಶ್ನೆ

ಬೆಂಗಳೂರು, ನ.27- ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಎರಡು ವರ್ಷಗಳ ಹಿಂದೆಯೇ ಅಂಗೀಕಾರಗೊಂಡಿದೆ. ಅದನ್ನು ಜಾರಿಗೆ ತರಲು ಯಾರೂ ಅಡ್ಡಿಪಡಿಸಿಲ್ಲ. ಹಾಗಿದ್ದರೂ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನವಿರ್‌ವಿಂಗಡಣೆಯೊಂದಿಗೆ ತಳುಕು ಹಾಕುತ್ತಿರುವುದೇಕೆ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡು ಎರಡು ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಮಹಿಳಾ ಮೀಸಲಾತಿ ಜಾರಿಗೆ ಯಾವುದೇ ಅಡ್ಡಿಯಿಲ್ಲ. ಆದರೆ, ಅದನ್ನು ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ ಸಂಪರ್ಕಿಸುವ ಅಗತ್ಯವೇನಿದೆ? ಮಹಿಳಾ ಮೀಸಲಾತಿ ಜಾರಿಗೆ ತರಲು ವಿಳಂಬ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಮಸೂದೆಯ ಕರಡು ಪ್ರತಿಯನ್ನು ಸಮರ್ಪಕವಾಗಿ ಮುಂದಿಡದೆ ಕ್ಷೇತ್ರ ಪುನರ್‌ವಿಂಗಡಣೆ ಕಾಯ್ದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ತರಾತುರಿ ನಡೆಸುತ್ತಿರುವುದೇಕೆ? ಅಧಿಕಾರದಲ್ಲಿ ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಮಂಡಿಸಲು ಪ್ರಯತ್ನಿಸಲಾಗುತ್ತಿದೆ. ಸಂಸತ್ತಿನಲ್ಲಿ ಬಹುಮತದ ಕೊರತೆ ಇದ್ದರೂ ವಿವಿಧ ಪಕ್ಷಗಳನ್ನು ವಿಭಜಿಸಿ ಮಸೂದೆಗೆ ಅನುಮೋದನೆ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ನ್ಯಾಯಾಂಗ ಪ್ರಕ್ರಿಯೆಯಿಂದ ವಿನಾಯಿತಿ ನೀಡುವ ವಿಚಾರದಲ್ಲಿ ಸುಮಾರು 70ರಿಂದ 80 ಸಂಸದರನ್ನು ಅಧಿವೇಶನದಿಂದ ಹೊರಹಾಕಲಾಗಿತ್ತು. ತಮ್ಮ ಕೆಲಸ ಆಗಬೇಕೆಂದರೆ ಯಾವ ರೀತಿಯಲ್ಲಿ ಬೇಕಾದರೂ ನಡೆದುಕೊಳ್ಳುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆಶಾ ಕಾರ್ಯಕರ್ತೆಯರ ಗೌರವಧನ ವಿಚಾರವಾಗಿ ಮಾತನಾಡಿದ ಅವರು, ದೇಶದ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ಆಶಾ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಕಡಿಮೆಯಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿಯೂ ಸುಮಾರು ಎರಡೂವರೆ ಸಾವಿರ ರೂಪಾಯಿ ಗೌರವಧನ ನೀಡಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ನಾಯಕರು ಏಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದರು.

ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಗೌರವಧನದಲ್ಲಿ ಕೇಂದ್ರ ಸರ್ಕಾರದ ಪಾಲು ಎಷ್ಟಿದೆ ಎಂಬುದನ್ನು ಗಮನಿಸಬೇಕು. ಇದು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುಷ್ಠಾನಗೊಳ್ಳುವ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ ಸಹಭಾಗಿತ್ವವೂ ಅಗತ್ಯವಾಗಿದೆ. ಯೋಜನೆಯ ಜವಾಬ್ದಾರಿಯಲ್ಲಿ ಕೇಂದ್ರದ ಪಾಲು ಕಡಿಮೆಯಿದ್ದರೆ ಅದನ್ನು ಹೆಚ್ಚಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಬೇಕು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತರನ್ನು ಭೇಟಿ ಮಾಡುತ್ತಿರುವ ಬಿಜೆಪಿಯವರು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡಲಿ ಎಂದು ಸವಾಲು ಹಾಕಿದರು.
ಆಶಾ ಕಾರ್ಯಕರ್ತೆಯರು ಸಹನೆಯಿಂದ ಇರಬೇಕು. ಆರ್ಥಿಕ ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ದೊಡ್ಡ ಆರ್ಥಿಕ ಹೊರೆ ಉಂಟುಮಾಡುವ ಬೇಡಿಕೆಗಳನ್ನು ಏಕಾಏಕಿ ಮುಂದಿಟ್ಟರೆ ಅವುಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಸರ್ಕಾರ ಬಜೆಟ್‌ನಲ್ಲಿನ ಅನುದಾನ ಮತ್ತು ವೆಚ್ಚಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ನಮ್ಮದು ಆಳುವ ಸರ್ಕಾರವಲ್ಲ, ಜನರ ಮಾತುಗಳನ್ನು ಆಲಿಸುವ ಸರ್ಕಾರ. ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ನೀಡುತ್ತಿರುವ ಭರವಸೆಗಳಿಗೆ ಮನ್ನಣೆ ನೀಡಬೇಕು. ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಚಳಿ, ಮಳೆಯ ನಡುವೆಯೂ ಬೀದಿಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ. ಅವರ ಸಮಸ್ಯೆಗಳನ್ನು ಸರ್ಕಾರ ಆಲಿಸುತ್ತಿದ್ದು, ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಮುಂದಾಗುವಂತೆ ಮನವಿ ಮಾಡಿದರು.

RELATED ARTICLES

Latest News