ಬೆಂಗಳೂರು,ನ.27-ಚಳಿಗಾಲದಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣವಾಗುವುದರಿಂದ ವಾಹನ ಚಲಾಯಿಸುವಾಗ ವಾಹನ ಚಾಲಕರು ಪ್ರಯಾಣಿಕರ ಸುರಕ್ಷತೆಯತ್ತ ಗಮನಹರಿಸುವಂತೆ ಕೆಎಸ್ಆರ್ಟಿಸಿ ಚಾಲಕರಿಗೆ ಸೂಚನೆ ನೀಡಿದೆ. ಈಗಾಗಲೇ ಚಳಿಗಾಲ ಪ್ರಾರಂಭವಾಗಿದ್ದು, ಮುಂಜಾನೆ ಹಾಗೂ ರಾತ್ರಿ ವೇಳೆ ಹೆಚ್ಚಿನ ಮಂಜು ಬೀಳುವುದರಿಂದ ರಸ್ತೆ ಗೋಚರತೆ ಕಷ್ಟವಾಗಿರುತ್ತದೆ. ಆದ್ದರಿಂದ ಚಾಲಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವುದು ಸೂಕ್ತ. ಅದರಲ್ಲೂ ಮಡಿಕೇರಿ, ವಿರಾಜಪೇಟೆ, ಕೊಡಗು, ಆಗುಂಬೆ, ಊಟಿ ರಸ್ತೆಗಳಲ್ಲಿ ಸಂಚರಿಸುವ ಸಾರಿಗೆ ವಾಹನದ ಚಾಲಕರು ಬಹಳಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸುರಕ್ಷಿತ ಚಾಲನೆ ಮಾಡುವಂತೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮಗಳೇನು?
ವಾಹನ ನಿಲ್ದಾಣದಿಂದ ಹೊರಡುವ ಮುನ್ನ ವಾಹನದ ಹೆಡ್ಲೈಟ್, ಇಂಡಿಕೇಟರ್, ಬ್ರೇಕ್ ಲೈಟ್ ಮತ್ತು ವೈಫರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು. ಮಂಜು ಅಥವಾ ಕಡಿಮೆ ಗೋಚರತೆಯ ಸಂದರ್ಭದಲ್ಲಿ ಲೋಬಿಮ್ ಲೈಟ್ ಬಳಸಿಕೊಂಡು ವೇಗವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು, ವಾಹನಗಳ ನಡುವೆ ಅಂತರ ಕಾಪಾಡಿಕೊಳ್ಳಬೇಕು.
ಅನಗತ್ಯ ಓವರ್ಟೇಕ್ ಮಾಡಬಾರದು. ಪಥವನ್ನು ಬದಲಾಯಿಸಬಾರದು, ಹಠಾತ್ ಬ್ರೇಕ್ ಹಾಕುವುದು ಹಾಗೂ ವೇಗದ ಏರಿಳಿತಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಮುಂಜಾನೆ ಹಾಗೂ ರಾತ್ರಿ ವೇಳೆ ಹೆಚ್ಚು ಜಾಗರೂಕತರಾಗಿರಬೇಕು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಮತ್ತು ಶಾಲೆಗಳ ಸಮೀಪ ಎಚ್ಚರಿಕೆ ವಹಿಸಬೇಕು. ವಾಹನದ ಯಾವುದೇ ತಾಂತ್ರಿಕ ದೋಷ ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ದೋಷ ಸರಿಪಡಿಸಿಕೊಂಡ ನಂತರವೇ ವಾಹನ ಚಾಲನೆ ಮಾಡಬೇಕೆಂದು ನಿಗಮ ತಿಳಿಸಿದೆ.
