Homeರಾಜ್ಯರಾಜ್ಯದ ನಗರಾಭಿವೃದ್ದಿಯಲ್ಲಿ ಜಪಾನ್‌ ಮಾದರಿ ಅನುಸರಣೆ : ಡಿ.ಕೆ.ಶಿವಕುಮಾರ್‌

ರಾಜ್ಯದ ನಗರಾಭಿವೃದ್ದಿಯಲ್ಲಿ ಜಪಾನ್‌ ಮಾದರಿ ಅನುಸರಣೆ : ಡಿ.ಕೆ.ಶಿವಕುಮಾರ್‌

ಬೆಂಗಳೂರು, ನ.28- ಜಪಾನ್‌ನ ಮೂರು ದಿನಗಳ ಪ್ರವಾಸ ಫಲಪ್ರದವಾಗಿದ್ದು, ಅಲ್ಲಿನ ನಗರಾಭಿವೃದ್ಧಿ, ಸಾರಿಗೆ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ ಹಾಗೂ ಕೈಗಾರಿಕಾ ಅಭಿವೃದ್ಧಿ ಮಾದರಿಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿ ಅನುಷ್ಠಾನಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ವಿಧಾನಸೌಧದ ಸಂಗಮ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ದಿನಗಳ ಜಪಾನ್‌ ಪ್ರವಾಸದ ತಮ ಅನುಭವಗಳನ್ನು ಹಂಚಿಕೊಂಡರು.

ಜಪಾನ್‌ ನಲ್ಲಿ ಟೊಯೋಟಾ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಹೊಸ ಘಟಕ ಸ್ಥಾಪಿಸಲು ಟೊಯೋಟಾ ಸಂಸ್ಥೆ ನಿರ್ಧರಿಸಿದೆ. ಕರ್ನಾಟಕದಲ್ಲಿಯೂ ಬಿಡದಿಯಲ್ಲಿರುವ ಘಟಕದ ಜೊತೆಗೆ ಮತ್ತೊಂದು ಘಟಕ ಸ್ಥಾಪಿಸುವಂತೆ ಮನವಿ ಮಾಡಲಾಗಿದೆ. ಟೋಕಿಯೋ ಒಲಿಂಪಿಕ್‌್ಸ ಸಂದರ್ಭದಲ್ಲಿ ಪರಿಚಯಿಸಲಾದ ಸಣ್ಣ ಗಾತ್ರದ ಟ್ಯಾಕ್ಸಿ ಮಾದರಿಯ ಕಾರು ಶ್ರೀಸಾಮಾನ್ಯರಿಗೆ ಹೆಚ್ಚು ಅನುಕೂಲವಾಗುವಂತಿದೆ. ಅಂತಹ ಕಾರನ್ನು ಹೈಬ್ರಿಡ್‌ ಮಾದರಿಯಲ್ಲಿ ಕರ್ನಾಟಕದಲ್ಲಿಯೇ ಉತ್ಪಾದಿಸುವಂತೆ ಕೋರಲಾಗಿದೆ. ಈ ಕಾರಿನ ಬೆಲೆ ಸುಮಾರು 7ರಿಂದ 8 ಲಕ್ಷ ರೂಪಾಯಿ ಇರಬಹುದೆಂಬ ನಿರೀಕ್ಷೆಯಿದೆ. ನಿರ್ವಹಣಾ ವೆಚ್ಚವೂ ಕಡಿಮೆಯಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಟೊಯೋಟಾ ಸಂಸ್ಥೆಯವರು ಟ್ಯಾಕ್ಸಿ ಸೇವೆಯ ಸಾಧ್ಯತೆಗಳ ಕುರಿತು ಮತ್ತಷ್ಟು ಅಧ್ಯಯನ ನಡೆಸಿ ಬೆಂಗಳೂರಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ವಾಹನ ಉತ್ಪಾದನಾ ಘಟಕಗಳ ವಿಸ್ತರಣೆಗೆ ಸಂಸ್ಥೆ ಆಸಕ್ತಿ ತೋರಿಸಿದೆ. ನಾನು ಭೇಟಿ ನೀಡಿದ್ದರಿಂದ ರಾಜ್ಯಕ್ಕೆ ಏನಾದರೂ ಪ್ರಯೋಜನವಾಗಬೇಕು ಎಂದು ಅವರಿಗೆ ತಿಳಿಸಿದ್ದೇನೆ ಎಂದರು. ನಗರದ ಕೊನೆಯ ಹಂತದವರೆಗೂ ಸಂಪರ್ಕ ವ್ಯವಸ್ಥೆಯಲ್ಲಿ ಸ್ಥಳೀಯ ಆಟೋರಿಕ್ಷಾಗಳ ಪಾತ್ರ ಮಹತ್ವದ್ದಾಗಿದೆ. ಉದ್ಯೋಗ ಸೃಷ್ಟಿ ಹಾಗೂ ಸಾರ್ವಜನಿಕ ಸಾರಿಗೆ ಸಂಪರ್ಕಕ್ಕೆ ಆಟೋಗಳ ಅಗತ್ಯವಿದೆ. ಹೊಸ ಟ್ಯಾಕ್ಸಿ ವ್ಯವಸ್ಥೆ ಜಾರಿಗೆ ಬಂದರೂ ಆಟೋ ಚಾಲಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಜಪಾನ್‌ ನ ಕವಾಸಕಿ ಹಾರೋಹಳ್ಳಿಯಲ್ಲಿ ಸುಮಾರು 600 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಘಟಕ ಸ್ಥಾಪಿಸಲು ಒಪ್ಪಿದೆೆ. ಜೈವಿಕ ತಂತ್ರಜ್ಞಾನ, ಔಷಧ ತಯಾರಿಕೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿಯೂ ಜಪಾನ್‌ ಸಂಸ್ಥೆಗಳು ಹೆಚ್ಚಿನ ಆಸಕ್ತಿ ತೋರಿಸಿವೆ ಎಂದು ತಿಳಿಸಿದರು. ಏಪ್ರಿಲ್‌ 22ರಿಂದ ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಜಪಾನ್‌ನ ವಿವಿಧ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ಒದಗಿಸುವುದರ ಜೊತೆಗೆ ಅನುಮತಿ ಮತ್ತು ಮಂಜೂರಾತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಾದ ಭೂಮಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಹೂಡಿಕೆದಾರರಿಗೆ ಸಲಹೆ ನೀಡಲಾಗಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಜಪಾನ್‌ನಿಂದ ಮರಳಿದ ಬಳಿಕ ತ್ವರಿತ ವಿಲೇವಾರಿಗಳ ಚರ್ಚೆ ನಡೆಸಲಾಗುವುದು ಎಂದರು.

ಜಪಾನ್‌ನಲ್ಲಿ ಸಾರಿಗೆ ಅತ್ಯಂತ ವ್ಯವಸ್ಥಿತವಾಗಿದೆ. ಅಲ್ಲಿನ ಜನರು ಬಹುತೇಕ ರೈಲು ಸಂಪರ್ಕವನ್ನೇ ಅವಲಂಬಿಸಿದ್ದಾರೆ. ರೈಲುಗಳು ನಿಗದಿತ ಸಮಯಕ್ಕೆ ಬರುತ್ತವೆ. ನಿಲ್ದಾಣಗಳೂ ಅತ್ಯುತ್ತಮವಾಗಿದ್ದು, ನಮ ವಿಮಾನ ನಿಲ್ದಾಣಗಳಿಗಿಂತಲೂ ಉತ್ತಮ ಸೌಲಭ್ಯಗಳನ್ನು ಹೊಂದಿವೆ. ಕೆಳಭಾಗದಲ್ಲಿ ರೈಲು ಸಂಚಾರವಿದ್ದರೆ ಮೇಲ್ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಳು, ಐಷಾರಾಮಿ ಹೋಟೆಲ್‌ಗಳು ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಾಣವಾಗುವ ಮೆಟ್ರೋ ಮಾರ್ಗಗಳ ವಿನ್ಯಾಸ ಮತ್ತು ನಿಲ್ದಾಣಗಳ ಅಭಿವೃದ್ಧಿಯಲ್ಲಿ ಜಪಾನ್‌ ಮಾದರಿಯನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮುಂದಿನ ಮೆಟ್ರೋ ಯೋಜನೆಗಳಲ್ಲಿ ಸುಮಾರು ಐದು ಎಕರೆ ಜಾಗವನ್ನು ಮೀಸಲಿಟ್ಟು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ಇದರಿಂದ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ತುಮಕೂರಿನಿಂದ ಬೆಂಗಳೂರಿನವರೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ನಿನ್ನೆ ಚರ್ಚೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿಯೇ ಮೆಟ್ರೋ ಸಂಪರ್ಕ ಕಲ್ಪಿಸುವ ಉದ್ದೇಶವಿದೆ. ಇದಕ್ಕಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಹೊಸದಾಗಿ ಭೂಸ್ವಾಧೀನ ಮಾಡಿಕೊಳ್ಳದೆ ಯೋಜನೆ ಅನುಷ್ಠಾನಗೊಳಿಸುವುದು ನಮ ಉದ್ದೇಶ. ರೈಲ್ವೆ ನಿಲ್ದಾಣಗಳನ್ನು ಹೊರತುಪಡಿಸಿ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ ಎಂದರು.

ಜಪಾನ್‌ ನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನೂ ಅಧ್ಯಯನ ಮಾಡಲಾಗಿದೆ. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಮಾದರಿಯನ್ನು ಬೆಂಗಳೂರಿನಲ್ಲಿಯೂ ಅಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು. ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಜಪಾನ್‌ ಸಂಸ್ಥೆಗಳನ್ನು ಬೆಂಗಳೂರಿಗೆ ಆಹ್ವಾನಿಸಿ ಅಧ್ಯಯನ ನಡೆಸುವಂತೆ ಮನವಿ ಮಾಡಲಾಗುವುದು. ಅವರ ಅಧ್ಯಯನ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಪಾನ್‌ ನ ವಿದೇಶಾಂಗ ಸಚಿವರನ್ನು ಮತ್ತು ಭಾರತೀಯ ರಾಯಭಾರಿಯವರನ್ನು ಭೇಟಿ ಮಾಡಿದ್ದೇನೆ. ಹೇಳಿದರು. ಅಲ್ಲಿನ ಟ್ರೇಡ್‌ ಯೂನಿಯನ್‌ ಪ್ರತಿನಿಧಿಗಳೊಂದಿಗೂ ಚರ್ಚೆ ನಡೆಸಲಾಗಿದೆ. ಜಪಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯುವಕರನ್ನು ಭೇಟಿ ಮಾಡಿ ಅವರ ಅನುಭವಗಳನ್ನು ಆಲಿಸಲಾಗಿದೆ ಎಂದರು. ಕರ್ನಾಟಕದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಜಪಾನ್‌ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿನ ವ್ಯವಸ್ಥೆಗಳ ಬಗ್ಗೆ ಅವುಗಳಿಗೆ ಸಮಾಧಾನವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೂಡಿಕೆಗಳು ಬರುವ ನಿರೀಕ್ಷೆಯಿದೆ. ಕರ್ನಾಟಕವೇ ಭಾರತದಲ್ಲಿ ತಮ್ಮ ಮೊದಲ ಆದ್ಯತೆ ಎಂದು ಜಪಾನ್‌ನ ಕಂಪನಿಗಳು ತಿಳಿಸಿವೆ ಎಂದು ಹೇಳಿದರು.

ಅಲ್ಲಿನ ವಾಹನ ಉತ್ಪಾದನಾ ಘಟಕಗಳಲ್ಲಿ ಪ್ರತಿ ನಿಮಿಷಕ್ಕೂ ಒಂದು ಕಾರು ಉತ್ಪಾದನೆಯಾಗುವಷ್ಟು ವೇಗದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಒಂದೇ ಉತ್ಪಾದನಾ ಮಾರ್ಗದಲ್ಲಿ ನಾಲ್ಕು ಮಾದರಿಯ ಕಾರುಗಳನ್ನು ತಯಾರಿಸುವ ವ್ಯವಸ್ಥೆಯನ್ನೂ ಗಮನಿಸಿದ್ದೇನೆ. ಇಂತಹ ತಂತ್ರಜ್ಞಾನ ಮತ್ತು ಉತ್ಪಾದನಾ ಪದ್ಧತಿಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. ಜಪಾನ್‌ನಲ್ಲಿ ಭ್ರಷ್ಟಾಚಾರದ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಕರ್ನಾಟಕ ಭ್ರಷ್ಟಾಚಾರ ಮುಕ್ತ ರಾಜ್ಯ ಎಂಬುದು ಜಪಾನ್‌ನವರಿಗೂ ತಿಳಿದಿದೆ ಎಂದು ಹೇಳಿದರು. ಮೈಸೂರಿನಲ್ಲಿ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಹಿನ್ನೆಲೆಯಲ್ಲಿ ತಮ ಮೂರು ದಿನಗಳ ಪ್ರವಾಸವನ್ನು ಮೊಟಕುಗೊಳಿಸಿ ಹಿಂದಿರುಗಿದ್ದಾಗಿ ತಿಳಿಸಿದರು.

RELATED ARTICLES

Latest News