Homeರಾಜ್ಯಮತ್ತೆ ಬೇಲೂರು ಕಡೆಗೆ ಮುಖ ಮಾಡಿದ ಕಾಡಾನೆಗಳ ಹಿಂಡು : ಅಪಾರ ಬೆಳೆ ನಾಶ, ರೈತರು...

ಮತ್ತೆ ಬೇಲೂರು ಕಡೆಗೆ ಮುಖ ಮಾಡಿದ ಕಾಡಾನೆಗಳ ಹಿಂಡು : ಅಪಾರ ಬೆಳೆ ನಾಶ, ರೈತರು ಕಂಗಾಲು

ಹಾಸನ,ನ.28- ಜಿಲ್ಲೆಯ ಬೇಲೂರು ಭಾಗದಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಆರಂಭಿಸಿದ್ದ ಆನೆ ಸೆರೆ ಹಾಗೂ ಸ್ಥಳಾಂತರ ಕಾರ್ಯಾಚರಣೆ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದು, ಕಾಡಿನತ್ತ ತೆರಳಿದ್ದ 38 ಕಾಡಾನೆಗಳ ಹಿಂಡು ಮತ್ತೆ ಬೇಲೂರು ಭಾಗಕ್ಕೆ ಮರಳಿದೆ. ಬೇಲೂರು ತಾಲ್ಲೂಕಿನ ಜಗಬೋರನಹಳ್ಳಿ, ಬಿಕ್ಕೋಡು ಹಾಗೂ ಅರೇಹಳ್ಳಿ ಭಾಗದ ಕಾಫಿ ತೋಟಗಳಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳನ್ನು ಒಟ್ಟುಗೂಡಿಸಿ, ಭದ್ರಾ ಅಭಯಾರಣ್ಯದತ್ತ ಓಡಿಸುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್‌ ಸಿಬ್ಬಂದಿ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ತತ್ಕೊಳ ಮೀಸಲು ಅರಣ್ಯದವರೆಗೆ ಕೊಂಡೊಯ್ದಿದ್ದರು.

ಆದರೆ ಚಿಕ್ಕಮಗಳೂರು ಭಾಗದ ಶಾಸಕರು ಹಾಗೂ ರೈತರು ಆನೆಗಳನ್ನು ತಮ ಭಾಗಕ್ಕೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಕಾರ್ಯಾಚರಣೆ ಸಂಪೂರ್ಣವಾಗಿ ನಿಂತಿದ್ದು, ಆನೆಗಳನ್ನು ಕಾಡಿನತ್ತ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಮತ್ತೆ ಬೇಲೂರು ಭಾಗದತ್ತ ಹಿಮೆಟ್ಟಿಸಿದ್ದಾರೆ. ಇದೀಗ 38 ಕಾಡಾನೆಗಳ ಹಿಂಡು ಮತ್ತೆ ಬೇಲೂರು ತಾಲ್ಲೂಕಿನತ್ತ ಬಂದಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಮೂರು ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಬಳಿಕ ಆನೆ ಸೆರೆ ಹಾಗೂ ಸ್ಥಳಾಂತರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ಸಲಗಗಳನ್ನು ಸೆರೆ ಹಿಡಿಯಲಾಗಿತ್ತು. ಕಾರ್ಯಾಚರಣೆಗೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 350 ಅರಣ್ಯ ಸಿಬ್ಬಂದಿ, 12 ಸಾಕಾನೆಗಳು, 6 ಥರ್ಮಲ್‌ ಡ್ರೋನ್‌ಗಳು ಹಾಗೂ ಡಾಗ್‌ ಸ್ಕ್ವಾಡ್‌ಗಳನ್ನು ಬಳಸಲಾಗಿತ್ತು. ಆದರೆ ಕಾರ್ಯಾಚರಣೆ ಸ್ಥಗಿತಗೊಂಡ ಪರಿಣಾಮ ಬೇಲೂರು ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಜಮೀನುಗಳಿಗೆ ನುಗ್ಗಿ ಅಡಿಕೆ, ಭತ್ತ, ಬಾಳೆ ಬೆಳೆಗಳನ್ನು ನಾಶ ಮಾಡುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

RELATED ARTICLES

Latest News