ನವದೆಹಲಿ, ನ.28- (ಪಿಟಿಐ) ಭಾರತ ಮತ್ತು ಯುರೋಪಿಯನ್ ಒಕ್ಕೂಟವು ವಿದೇಶಾಂಗ ನೀತಿ ಮತ್ತು ಭದ್ರತೆಯ ಕುರಿತು ಪ್ರಮುಖ ಸಮಾಲೋಚನೆಯನ್ನು ನಡೆಸಿದ್ದು, ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್ನ ತತ್ವಗಳಿಗೆ ಅನುಸಾರವಾಗಿ ಉಕ್ರೇನ್ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಅಗತ್ಯವನ್ನು ಒತ್ತಿಹೇಳಿದೆ. ದೆಹಲಿಯಲ್ಲಿ ನಡೆದ ಭಾರತ-ಇಯು ವಿದೇಶಾಂಗ ನೀತಿ ಮತ್ತು ಭದ್ರತಾ ಸಮಾಲೋಚನೆಗಳ (ಎಫ್ಪಿಎಸ್ಸಿ) 12 ನೇ ಸುತ್ತಿನಲ್ಲಿ, ಜಾಗತಿಕ ಆಹಾರ ಭದ್ರತೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಕಪ್ಪು ಸಮುದ್ರದಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸುವ ಅಗತ್ಯತೆಯ ಕುರಿತು ಎರಡೂ ಕಡೆಯವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಭಯೋತ್ಪಾದನೆ ಮತ್ತು ಹಿಂಸಾತಕ ಉಗ್ರವಾದವನ್ನು ಎರಡೂ ಕಡೆಯವರು ನಿಸ್ಸಂದಿಗ್ಧವಾಗಿ ಮತ್ತು ಬಲವಾಗಿ ಖಂಡಿಸಿದರು ಎಂದು ಅದು ಹೇಳಿದೆ.ಸಭೆಯ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಮತ್ತು ಯುರೋಪಿಯನ್ ಬಾಹ್ಯ ಕ್ರಿಯಾ ಸೇವೆಯ ರಾಜಕೀಯ ವ್ಯವಹಾರಗಳ ಉಪ ಪ್ರಧಾನ ಕಾರ್ಯದರ್ಶಿ ಓಲೋಫ್ ಸ್ಕೂಗ್ ವಹಿಸಿದ್ದರು. ಭಾರತ-ಯುರೋಪ್ ಒಕ್ಕೂಟದ ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಯ ಅಡಿಯಲ್ಲಿ ಭದ್ರತೆ ಮತ್ತು ರಕ್ಷಣಾ ಸಹಕಾರದ ಕುರಿತು ಎರಡೂ ಕಡೆಯವರು ತಮ್ಮ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡರು, ಇದರಲ್ಲಿ ಸಮುದ್ರ ಭದ್ರತೆ, ರಕ್ಷಣಾ ಉದ್ಯಮ ಮತ್ತು ತಂತ್ರಜ್ಞಾನ, ಸೈಬರ್ ಮತ್ತು ಹೈಬ್ರಿಡ್ ಬೆದರಿಕೆಗಳು, ಬಾಹ್ಯಾಕಾಶ ಮತ್ತು ಭಯೋತ್ಪಾದನೆ ನಿಗ್ರಹ ಸೇರಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್ನಲ್ಲಿ ನವದೆಹಲಿಯಲ್ಲಿ ನಡೆದ ಉದ್ಘಾಟನಾ ಭದ್ರತೆ ಮತ್ತು ರಕ್ಷಣಾ ಸಂವಾದದ ಆತಿಥ್ಯವನ್ನು ಎರಡೂ ಕಡೆಯವರು ಮೆಚ್ಚಿಕೊಂಡರು ಮತ್ತು ಭಾರತ-ಯುರೋಪ್ ಒಕ್ಕೂಟದ ಮಾಹಿತಿ ಭದ್ರತಾ ಒಪ್ಪಂದವನ್ನು ಮುಕ್ತಾಯಗೊಳಿಸುವ ಪ್ರಗತಿ ಮತ್ತು ಪ್ರಾಮುಖ್ಯತೆಯನ್ನು ಗಮನಿಸಿದರು.ಮುಂದಿನ ವರ್ಷ ಭದ್ರತೆ ಮತ್ತು ರಕ್ಷಣಾ ಸಂವಾದದ ಎರಡನೇ ಆವೃತ್ತಿಯನ್ನು ನಡೆಸಲು ಅವರು ಒಪ್ಪಿಕೊಂಡರು.ಈ ಸಮಾಲೋಚನೆಗಳು ಭಾರತ-ಯುರೋಪ್ ಒಕ್ಕೂಟದ ಸಂಬಂಧಗಳಲ್ಲಿನ ಬಲವಾದ ಆವೇಗ ಮತ್ತು ಪ್ರಸ್ತುತ ಸ್ಥಿತಿಯ ಬಗ್ಗೆ ಪರಿಶೀಲಿಸಲು ಮತ್ತು ಜನವರಿಯಲ್ಲಿ ನಡೆದ 16 ನೇ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಅನುಮೋದಿಸಲಾದ 2030 ರ ಕಡೆಗೆ: ಜಂಟಿ ಭಾರತ-ಯುರೋಪ್ ಒಕ್ಕೂಟದ ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿೞಗೆ ಅನುಗುಣವಾಗಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಆಳಗೊಳಿಸುವ ಮಾರ್ಗಗಳನ್ನು ಚರ್ಚಿಸಲು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸಿದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಬಹುಪಕ್ಷೀಯತೆ ಮತ್ತು ಅಂತರರಾಷ್ಟ್ರೀಯ ಕಾನೂನು ಸವಾಲು ಎದುರಿಸುತ್ತಿರುವ ಪ್ರಸ್ತುತ ಭೌಗೋಳಿಕ ರಾಜಕೀಯ ಸಂದರ್ಭದಲ್ಲಿ, ಎರಡೂ ಕಡೆಯವರು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅದು ಪ್ರತಿಪಾದಿಸುವ ನಿಯಮಗಳು ಮತ್ತು ತತ್ವಗಳನ್ನು, ವಿಶೇಷವಾಗಿ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯುವ ದೃಢ ಬದ್ಧತೆಯನ್ನು ಒತ್ತಿಹೇಳಿದ್ದಾರೆ ಎಂದು ಅದು ಹೇಳಿದೆ. ಉಭಯ ಪಕ್ಷಗಳು, ವಿಶ್ವಸಂಸ್ಥೆಯನ್ನು ಕೇಂದ್ರದಲ್ಲಿರಿಸಿಕೊಂಡಿರುವ ಪರಿಣಾಮಕಾರಿ ಬಹುಪಕ್ಷೀಯ ವ್ಯವಸ್ಥೆಯ ಮಹತ್ವವನ್ನು ಒತ್ತಿಹೇಳಿದವು.
