Homeಇದೀಗ ಬಂದ ಸುದ್ದಿವೇಟ್ರಿವೇಲ್‌ ಮುರುಗನುಕ್ಕು ಅರೋಗರಾ... ಗಮನ ಸೆಳೆದ ಪ್ರಧಾನಿ ಮೋದಿ ಸಂದೇಶ

ವೇಟ್ರಿವೇಲ್‌ ಮುರುಗನುಕ್ಕು ಅರೋಗರಾ… ಗಮನ ಸೆಳೆದ ಪ್ರಧಾನಿ ಮೋದಿ ಸಂದೇಶ

ನವದೆಹಲಿ,ನ.28- ವೇಟ್ರಿವೇಲ್‌ ಮುರುಗನುಕ್ಕು ಅರೋಗರಾ ಎಂಬ ಸಂದೇಶ ಹಂಚಿಕೊಳ್ಳುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ತಮಿಳುನಾಡಿನ ಮಧುರೈ ತಿರುಪ್ಪರಂಕುಂಡ್ರಮ್‌ ಬೆಟ್ಟದ ವಿವಾದಿತ ದೀಪತೂನ್‌ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದಕ್ಕೆ ಸಂತಸ ಹಂಚಿಕೊಂಡಿದ್ದಾರೆ. ತಮ ಎಕ್‌್ಸಖಾತೆಯಲ್ಲಿ ವೇಟ್ರಿವೇಲ್‌ ಮುರುಗನುಕ್ಕು ಅರೋಗರಾ! ಎಂಬ ಸಂದೇಶ ಹಂಚಿಕೊಂಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಪೋಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಬಗ್ಗೆಯಾಗಲೀ, ದೀಪತೂನ್‌ ವಿವಾದವನ್ನಾಗಲಿ ಎಲ್ಲೂ ಉಲ್ಲೇಖಿಸಿಲ್ಲ.

ಇಂಗ್ಲಿಷ್‌, ತಮಿಳು ಮತ್ತು ಹಿಂದಿ ಲಿಪಿಗಳಲ್ಲಿ ತಮಿಳು ಭಕ್ತಿಗೀತೆಯ ಘೋಷಣೆಯನ್ನು ಹಂಚಿಕೊಂಡಿದ್ದಾರೆ. ನಿನ್ನೆ ಸುಪ್ರೀಂ ಕೋರ್ಟ್‌ ತಿರುಪ್ಪರಂಕುಂಡ್ರಮ್‌ ಬೆಟ್ಟದ ದೀಪತೂನ್‌ನಲ್ಲಿ ನಾಳೆ ಕಾರ್ತಿಕ ದೀಪ ಬೆಳಗಿಸುವಂತೆ ನಿರ್ದೇಶಿಸಿತ್ತು. ದೇವಾಲಯದ ಭದ್ರತೆಯನ್ನು ಸಿಆರ್‌ಪಿಎಫ್‌ಗೆ ವಹಿಸುವಂತೆ ಹಾಗೂ ದೇವಾಲಯದ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿ ಇಬ್ಬರು ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರನ್ನು ತಾತ್ಕಾಲಿಕ ಆಡಳಿತಕ್ಕೆ ನೇಮಿಸುವಂತೆ ಆದೇಶಿಸಿತ್ತು.

ನ.24ರ ಕಾರ್ತಿಕ ದೀಪೋತ್ಸವದಂದು ತಿರುಪ್ಪರಂಕುಂಡ್ರಮ್‌ ಬೆಟ್ಟದ ದೀಪತೂನ್‌ನಲ್ಲಿ ದೀಪ ಬೆಳಗಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಅಂದು ದೀಪತೂನ್‌ನಲ್ಲಿ ದೀಪ ಬೆಳಗಿಸದೆ, ಸಾಂಪ್ರದಾಯಿಕ ಉಚ್ಚಿಪಿಳ್ಳಯಾರ್‌ ಮಂಟಪದಲ್ಲಿ ಮಾತ್ರ ದೀಪ ಬೆಳಗಿಸಲಾಗಿತ್ತು.ಇದನ್ನು ಪ್ರಶ್ನಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಹಿಂದಿನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿತ್ತು. ತಮಿಳುನಾಡಿನ ಮುಖ್ಯ ಕಾರ್ಯದರ್ಶಿ, ಪೊಲೀಸ್‌‍ ಮಹಾನಿರ್ದೇಶಕ ಹಾಗೂ ಮಧುರೈ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್‌‍ ಜಾರಿ ಮಾಡಿತ್ತು. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ನಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಕರೆ ವಿವರಗಳು ಮತ್ತು ಅಧಿಕೃತ ದಾಖಲೆಗಳನ್ನು ಸಲ್ಲಿಸುವಂತೆಯೂ ಸೂಚಿಸಿತ್ತು.

ಇನ್ನೊಂದೆಡೆ, ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಕೆ.ಪಿ. ರಾಮಲಿಂಗಂ ಅವರು ದೀಪತೂನ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶವನ್ನು ಸ್ವಾಗತಿಸಿ, ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ರಾಜ್ಯದ 2,116 ದೇವಾಲಯಗಳಲ್ಲಿ ಅರಂ ಕಾಕ್ಕುಂ ಆಲಯ ದೀಪಂ ಕಾರ್ಯಕ್ರಮದಡಿ ದೀಪ ಬೆಳಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News