ಬೆಂಗಳೂರು,ಏ.28- ಸಂತ್ರಸ್ತ ಮಹಿಳೆಯರ ದೂರು ಆಧರಿಸಿ ಹಾಸನದ ಸಂಸದರ ವಿರುದ್ಧ ಕೇಳಿಬಂದಿರುವ ದೂರು ತನಿಖೆಗೆ ವಿಶೇಷ ದಳವನ್ನು ರಚಿಸಲಾಗಿದ್ದು, ಶಂಕಿತ ಆರೋಪಿ ದೇಶ ಬಿಟ್ಟು ಪರಾರಿಯಾಗಿದ್ದರೆ ಆ ಸಂಬಂಧಪಟ್ಟಂತೆ ಎಸ್‌ಐಟಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತ ಮಹಿಳೆಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಆಧರಿಸಿ ಮಹಿಳಾ ಆಯೋಗ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ. ಪತ್ರದ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ತನಿಖಾ ದಳ ರಚಿಸಲಿದೆ ಎಂದರು.
ಇಂದು ಶೀಘ್ರವೇ ಎಸ್‌ಐಟಿ ರಚನೆ ಕುರಿತಂತೆ ಅಧಿ ಕೃತ ಆದೇಶ ಪ್ರಕಟಿಸಲಾಗುವುದು. ಒಮ್ಮೆ ತನಿಖಾ ದಳ ಅಸ್ತಿತ್ವಕ್ಕೆ ಬಂದ ಬಳಿಕ ತನಿಖೆಯ ಅಗತ್ಯ ಕುರಿತು ಅದರ ಮುಖ್ಯಸ್ಥರಾಗಿರುವ ಹಿರಿಯ ಅಧಿ ಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸರ್ಕಾರ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತನಿಖೆಯಲ್ಲಿ ಯಾವ ರೀತಿಯ ವರದಿ ಬರುತ್ತದೆ ಎಂಬುದನ್ನು ಪರಿಶೀಲಿಸಿ ಸರ್ಕಾರ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಸಾರ್ವಜನಿಕವಾಗಿ ಬೆಳಕಿಗೆ ಬಂದಿರುವ ವಿಡಿಯೋ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಈ ನಡುವೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿ ಬಂದಿದೆ. ಕಾನೂನು ಪ್ರಕಾರ ಎಸ್‌ಐಟಿ ಅಗತ್ಯವಾದ ಸೂಕ್ತ ಕ್ರಮ ಕೈಗೊಳ್ಳಲಿದೆ. ವಿದೇಶದಿಂದ ವಾಪಸ್ ಕರೆತರುವ ಕೆಲಸವನ್ನೂ ಎಸ್‌ಐಟಿ ಮಾಡಲಿದೆ ಎಂದು ಹೇಳಿದರು.
ತಾವು ಸೇರಿದಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಈವರೆಗೂ ಯಾವ ಸಂತ್ರಸ್ತ ಮಹಿಳೆಯರೂ ತಮ್ಮನ್ನು ಭೇಟಿ ಮಾಡಿಲ್ಲ. ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿಯೇ ಎಸ್‌ಐಟಿ ರಚಿಸಿದ್ದೇವೆ ಎಂದರು.