Sunday, November 24, 2024
Homeರಾಜ್ಯಸುಸೂತ್ರವಾಗಿ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ - 2

ಸುಸೂತ್ರವಾಗಿ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ – 2

ಬೆಂಗಳೂರು,ಏ.29- ದ್ವಿತೀಯ ಪಿಯುಸಿ ಎರಡನೇ ವಾರ್ಷಿಕ ಪರೀಕ್ಷೆಯು ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದ್ದು, ಸೂಕ್ತ ಬಿಗಿಭದ್ರತೆ ನಡುವೆ ಸುಸೂತ್ರವಾಗಿ ನಡೆಯುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ವೌಲ್ಯ ನಿರ್ಣಯ ಮಂಡಳಿಯು ಇಂದಿನಿಂದ ಮೇ 16ರವರೆಗೂ ರಾಜ್ಯದ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಿದೆ.

ದ್ವಿತೀಯ ಪಿಯುಸಿ ಮೊದಲ ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಅನುಕೂಲವಾಗುವಂತೆ ಎರಡನೇ ವಾರ್ಷಿಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆ ಬರೆಯಲು ಒಟ್ಟು 1,49,300 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇದರಲ್ಲಿ 84,933 ವಿದ್ಯಾರ್ಥಿಗಳು ಹಾಗೂ 64,367 ವಿದ್ಯಾರ್ಥಿನಿಯರು ನೊಂದಾಯಿಸಿಕೊಂಡಿದ್ದಾರೆ. 32,848 ವಿದ್ಯಾರ್ಥಿಗಳು ಮೊದಲ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳನ್ನು ಉತ್ತಮಪಡಿಸಿಕೊಳ್ಳಲು ಮತ್ತೆ ಪರೀಕ್ಷೆ ಬರೆಯುತ್ತಿದ್ದಾರೆ.

27,092 ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 139 ಖಾಸಗಿ ಅಭ್ಯರ್ಥಿಗಳು 89,221 ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ.ಭಾಷಾ ಪರೀಕ್ಷೆಗಳಾದ ಕನ್ನಡ, ಅರೇಬಿಕ್‌ ವಿಷಯಗಳ ಪರೀಕ್ಷೆ ಇಂದು ಬೆಳಿಗ್ಗೆ 10.15 ರಿಂದ 1.30ರವರೆಗೆ ನಡೆಯಿತು. ನಾಳೆ ಇತಿಹಾಸ, ಭೌತಶಾಸ್ತ್ರ, ಮೇ 2ರಂದು ಇಂಗ್ಲಿಷ್‌, ಮೇ 3ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 4 ರಂದು ಭೌಗೋಳ ಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲ ಗಣಿತದ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ಮೇ 9ರಂದು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, ಮೇ 11 ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಮೇ 13ರಂದು ಅರ್ಥಶಾಸ್ತ್ರ, ಮೇ 14 ರಂದು ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಮೇ 15ರಂದು ಹಿಂದಿ ಪರೀಕ್ಷೆಗಳು ನಡೆಯಲಿವೆ.

ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌ ಭಾಷಾ ಪರೀಕ್ಷೆಗಳು ಮೇ 16ರಂದು ಬೆಳಗಿನ ಅವಯಲ್ಲಿ ನಡೆದರೆ, ಇತರೆ ಕಲಾ ಮತ್ತು ಕೌಶಲ್ಯ ವಿಭಾಗಕ್ಕೆ ಸಂಬಂಧಪಟ್ಟ ವಿಷಯಗಳಾದ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್‌, ಆಟೋಮೊಬೈಲ್‌, ಬ್ಯೂಟಿ ಅಂಡ್‌ ವೆಲ್‌ನೆಸ್‌ ಪರೀಕ್ಷೆಗಳು ಮಧ್ಯಾಹ್ನ 2.15ರಿಂದ ಸಂಜೆ 4.30ರವರೆಗೆ ನಡೆಯಲಿವೆ.

ವಿಜ್ಞಾನ ವಿಭಾಗದಲ್ಲಿ 57,381, ವಾಣಿಜ್ಯ ವಿಭಾಗದಲ್ಲಿ 39,427 ಹಾಗೂ ಕಲಾ ವಿಭಾಗದಲ್ಲಿ 52,492 ವಿದ್ಯಾರ್ಥಿಗಳು 2ನೇ ವಾರ್ಷಿಕ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಬಸ್‌ ಸೇವೆ ಒದಗಿಸಲಿವೆ. ವಿದ್ಯಾರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

Latest News