Tuesday, May 21, 2024
Homeರಾಜ್ಯ"ಕಾಂಗ್ರೆಸ್ ಲೂಟಿಕೋರರ ಕೈಗೆ ದೇಶದ ಚುಕ್ಕಾಣಿ ಕೊಡಬೇಕೇ..?" : ಮುಂದುವರೆದ ಮೋದಿ ಅಟ್ಯಾಕ್

“ಕಾಂಗ್ರೆಸ್ ಲೂಟಿಕೋರರ ಕೈಗೆ ದೇಶದ ಚುಕ್ಕಾಣಿ ಕೊಡಬೇಕೇ..?” : ಮುಂದುವರೆದ ಮೋದಿ ಅಟ್ಯಾಕ್

ಬಾಗಲಕೋಟೆ,ಏ.29- ಕಾಂಗ್ರೆಸ್‌ ವಿರುದ್ದ ಮತ್ತೆ ವಾಗ್ದಾಳಿಯನ್ನು ಮುಂದುವರೆಸಿರುವ ಪ್ರಧಾನಿ ನರೇಂದ್ರಮೋದಿ ಅವರು, ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಲೂಟಿ ಹೊಡೆಯುವವರ ಕೈಗೆ ದೇಶದ ಚುಕ್ಕಾಣಿಯನ್ನು ಕೊಡಬೇಕೆ ಎಂದು ಮತದಾರರನ್ನು ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಾಗಲಕೋಟೆ ಮತ್ತು ಬಿಜಾಪುರ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ನಡೆಸಿದ ಮೋದಿ, ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ತುಷ್ಟೀಕರಣ ನೀತಿಯನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ನಿರ್ವಹಿಸುತ್ತಿಲ್ಲ ವಸೂಲಿ ಗ್ಯಾಂಗ್‌ನ್ನು ನಡೆಸುತ್ತಿದೆ.

ಕಾಂಗ್ರೆಸ್‌ ಲೂಟಿಕೋರ ಸರ್ಕಾರ, ಈ ಸರ್ಕಾರದ ಕೈಗೆ ಇಂಥಾ ದೊಡ್ಡ ದೇಶವನ್ನು ಕೊಡಬೇಕೆ? ಎಂಬುದನ್ನು ಮತದಾರರು ತೀರ್ಮಾನಿಸಬೇಕು. ಇದು ದೇಶದ ಭವಿಷ್ಯವನ್ನು ತೀರ್ಮಾನಿಸುವ ಚುನಾವಣೆ ಎಂದು ಮನವಿ ಮಾಡಿದರು. ಕಾಂಗ್ರೆಸ್‌ ಪಕ್ಷವು ಕರ್ನಾಟಕವನ್ನು ಲೂಟಿ ಮಾಡುವ ಎಟಿಎಂ ಮಾಡಿಕೊಂಡಿದೆ. ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ.

ಮುಂದೊಂದು ದಿನ ಸರ್ಕಾರಕ್ಕೆ ತನ್ನ ನೌಕರರಿಗೆ ಸಂಬಳ ಕೊಡಲೂ ಹಣವಿರುವುದಿಲ್ಲ, ಜತೆಗೆ ನಿಮ್ಮ ಮಕ್ಕಳನ್ನೂ ಹಸಿವಿನಿಂದ ನರಳುವಂತೆ ಮಾಡುವುದರಲ್ಲಿ ಸಂಶಯವಿಲ್ಲ, ಕಾಂಗ್ರೆಸ್‌ ಮೊದಲೇ ಪ್ಲ್ಯಾನ್‌ ಮಾಡಿ ವಸೂಲಿ ಮಾಡಿ ಸರ್ಕಾರದ ಖಜಾನೆಯಿಂದ ತನ್ನ ತಿಜೋರಿಯನ್ನು ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಕರ್ನಾಟಕದಲ್ಲಿ 2ಜಿ ಹಗರಣ ಮಾದರಿಯ ಲಕ್ಷಾಂತರ ಕೋಟಿಯ ಸ್ಕ್ಯಾಮ್‌ ಮಾಡುವ ಕನಸು ಕಾಣುತ್ತಿದೆ. ಕರ್ನಾಟಕದ ಲೂಟಿ ಮಾಡುವವರಿಗೆ 7 ಮೇ ಶಿಕ್ಷೆ ಸಿಗಬೇಕು, ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಅಂತ್ಯಗೊಳಿಸಬೇಕು ಎಂದು ಮೋದಿ ಹೇಳಿದರು.

ಮೋದಿ 10 ವರ್ಷಗಳಲ್ಲಿ ಕತ್ತಲಿನಲ್ಲಿದ್ದ 18 ಸಾವಿರ ಹಳ್ಳಿಗಳನ್ನು ವಿದ್ಯುತ್‌ ದೀಪಗಳಿಂದ ಬೆಳಕಿದ್ದಾರೆ. ಶೇ,16ರಷ್ಟು ಜನರಿಗೆ ಮಾತ್ರ ಈ ಮೊದಲು ಜಲಜೀವನ್‌ ಮಿಷನ್‌ ಅಡಿ ನೀರು ತಲುಪುತ್ತಿತ್ತು ಆದರೆ ಈಗ ಐದು ವರ್ಷಗಳಲ್ಲಿ ಶೇ.75ರಷ್ಟು ಜನರಿಗೆ ನೀರು ತಲುಪುತ್ತಿದೆ. ನಮ್ಮ ಸಂಕಲ್ಪ ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಟಾಪ್‌ 3 ಆರ್ಥಿಕತೆಯನ್ನಾಗಿಸುವುದು, ಭಾರತವನ್ನು ವಿಶ್ವದ ಮೂರನೇ ಆರ್ಥಿಕತೆ ಮಾಡುವ ತಾಕತ್ತು ನಿಮ್ಮ ಮತಕ್ಕಿದೆ ಎಂದರು.

ಮುಂದಿನ ಕೆಲ ವರ್ಷಗಳಲ್ಲಿ ಭಾರತವನ್ನು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿಸುವುದು ನಮ್ಮ ಸಂಕಲ್ಪವಾಗಿದೆ. ನಾವು ಭಾರತವನ್ನು ಉತ್ಪಾದನಾ ಹಬ್‌, ಕೌಶಲ್ಯ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ. ಇದಕ್ಕೆ ದೂರದೃಷ್ಟಿ ಬೇಕು. ಮೋಜು, ಮಸ್ತಿ ಮಾಡುವವರಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ್ನಾಟಕ ಸರ್ಕಾರ ತನ್ನ ನೌಕರರಿಗೆ ಸಂಬಳ ನೀಡದ ದಿನ ದೂರದಲ್ಲಿ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ವಸೂಲಿ ಗ್ಯಾಂಗ್‌ ನಡೆಸುತ್ತಿದೆ. ಸರ್ಕಾರವಲ್ಲಾ, 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರು, ಒಂದೇ ಬಾರಿಗೆ ಬಡತನವನ್ನು ತೊಡೆದುಹಾಕುತ್ತೇವೆ ಎಂದು ಹೇಳುತ್ತಾರೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಮತಗಳನ್ನು ಪಡೆಯಲು ಭಯೋತ್ಪಾದನೆ ಮತ್ತು ಮೂಲಭೂತವಾದಿ ಮನಸ್ಥಿತಿವುಳ್ಳವರನ್ನು ಕಾಂಗ್ರೆಸ್‌ ರಕ್ಷಿಸುತ್ತಿದೆ.

ತನ್ನ ಪ್ರಣಾಳಿಕೆಯಲ್ಲಿ ಧರ್ಮ ಆಧಾರಿತ ಮೀಸಲಾತಿ ನೀಡುವ ಸಂದೇಶ ನೀಡಿದೆ ಎಂದು ಆರೋಪಿಸಿದರು. ಚುನಾವಣೆಯಲ್ಲಿ ಸೋತವರು ತಂತ್ರಜ್ಞಾನ ಬಳಸಿ, ನಕಲಿ ವಿಡಿಯೋ ಸೃಷ್ಟಿಸಿ, ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇಂತಹ ನಕಲಿ ವಿಡಿಯೋಗಳ ಬಗ್ಗೆ ಪೊಲೀಸರು ಮತ್ತು ಬಿಜೆಪಿ ಪಕ್ಷದವರಿಗೆ ಮಾಹಿತಿ ನೀಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

RELATED ARTICLES

Latest News