Monday, June 17, 2024
Homeರಾಷ್ಟ್ರೀಯನಾಮಪತ್ರ ಹಿಂಪಡೆದ ಇಂದೋರ್‌ನ ಕಾಂಗ್ರೆಸ್‌ ಅಭ್ಯರ್ಥಿ

ನಾಮಪತ್ರ ಹಿಂಪಡೆದ ಇಂದೋರ್‌ನ ಕಾಂಗ್ರೆಸ್‌ ಅಭ್ಯರ್ಥಿ

ಭೂಪಾಲ್‌,ಏ.29- ಕಾಂಗ್ರೆಸ್‌ಗೆ ಗುಜರಾತ್‌ನಂತೆ ಮತ್ತೆ ಮುಖಭಂಗವಾಗಿದ್ದು, ಮಧ್ಯಪ್ರದೇಶದ ಇಂದೋರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್‌ ಕಾಂತಿಬಾಮ್‌ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

ಮತದಾನಕ್ಕೆ ಇನ್ನು 15 ದಿನಗಳ ಸಮಯ ಅವಕಾಶ ಇರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಕಾಂಗ್ರೆಸ್‌ಗೆ ಭಾರೀ ಮರ್ಮಾಘಾತವಾಗಿದೆ. ಮೂಲಗಳ ಪ್ರಕಾರ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ. ಇಂದೋರ್‌ ಜಿಲ್ಲಾಧಿಕಾರಿ ಅಶಿಶ್‌ ಸಿಂಗ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್‌ ಕಾಂತಿಬಾಮ್‌ ಅವರು ನಾಮಪತ್ರ ಹಿಂಪಡೆದಿರುವುದನ್ನು ಖಚಿತಪಡಿಸಿದ್ದಾರೆ.

ಈ ಮೂಲಕ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಬಿಜೆಪಿಯು ಮಾಜಿ ಸಂಸದ ಶಂಕರ್‌ ಲಲ್ವಾನಿ ಅವರ ಹಾದಿಯನ್ನು ಸುಗಮಗೊಳಿಸಿದ್ದಾರೆ. ಒಂದು ವೇಳೆ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದರೆ ಲಲ್ವಾನಿ ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ. ಮಧ್ಯಪ್ರದೇಶ ಸಚಿವ ಹಾಗೂ ಬಿಜೆಪಿ ನಾಯಕ ಕೈಲಾಶ್‌ ವಿಜಯ ವರ್ಗೀಯ ಅವರ ಜೊತೆ ಇರುವ ಕಾಂಗ್ರೆಸ್‌ ಅಭ್ಯರ್ಥಿಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಪಕ್ಷಕ್ಕೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

ಸ್ಥಳೀಯ ಬಿಜೆಪಿ ಶಾಸಕ ರಮೇಶ್‌ ಮೆಂಡೋಲ ಕೂಡ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಾಂಗ್ರೆಸ್‌ನ ಇಂದೋರ್‌ ಅಭ್ಯರ್ಥಿ ಅಕ್ಷಯ್‌ ಕಾಂತಿಬಾಮ್‌ ಅವರನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಕೈಲಾಶ್‌ ವಿಜ!ಯ ವರ್ಗೀಯ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಮೋಹನ್‌ ಯಾದವ್‌ ಮತ್ತು ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ ನೇತೃತ್ವದಲ್ಲಿ ಇಂದೋರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್‌ ಕಾಂತಿಬಾಮ್‌ ಅವರನ್ನು ಬಿಜೆಪಿಗೆ ಸ್ವಾಗತಿಸಲಾಗಿದೆ ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಇಂದೋರ್‌ನ ಪತ್ರಕರ್‌ ಕಾಲೋನಿಯಲ್ಲಿರುವ ಕಾಂತಿಬಾಮ್‌ ಅವರ ನಿವಾಸಕ್ಕೆ ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗಿದೆ.

ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ದೌಡಾಯಿಸಿದ್ದು, ನಾಮಪತ್ರ ಹಿಂಪಡೆದಿರುವ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.ಇಂದೋರ್‌ ಲೋಕಸಭಾ ಕ್ಷೇತ್ರವು ಮಧ್ಯಪ್ರದೇಶದಲ್ಲಿ ಅತಿದೊಡ್ಡ ಕ್ಷೇತ್ರವಾಗಿದೆ. ಇದು ಬಿಜೆಪಿಯ ಭದ್ರಕೋಟೆಯಾಗಿದ್ದು, ಲೋಕಸಭೆಯ ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸತತವಾಗಿ ಎಂಟು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದರು.

ಗುಜರಾತ್‌ನ ಸೂರತ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನೀಲೇಶ್‌ ಕುಂಬಾನಿಯವರ ನಾಮಪತ್ರವು ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿತ್ತು. ನಾಮಪತ್ರದಲ್ಲಿ ಸೂಚಕರಾಗಿ ಸಹಿ ಹಾಕಿದ್ದ ಮೂವರ ಹೆಸರು ನಕಲಿ ಎಂದು ಸಾಬೀತಾದ ಹಿನ್ನಲೆಯಲ್ಲಿ ಆಯೋಗ ನಾಮಪತ್ರವನ್ನು ತಿರಸ್ಕರಿಸಿತ್ತು. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಮತ್ತೊಂದು ಬೆಳವಣಿಗೆಯಲ್ಲಿ ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಯುವ ಮುನ್ನವೆ ಬಿಜೆಡಿಯ ಸೋರು ಶಾಸಕ ಪರಶುರಾಮ್‌ ದಾಡ ಬಿಜೆಪಿಗೆ ಸೇರ್ಪಡೆಯಾಗಿದ್ದರು.

RELATED ARTICLES

Latest News