Friday, May 17, 2024
Homeರಾಜ್ಯಹಾಸನ ಪೆನ್ ಡ್ರೈವ್ ಪ್ರಕರಣ, ಎಸ್‌ಐಟಿ ತಂಡ ಸಭೆ

ಹಾಸನ ಪೆನ್ ಡ್ರೈವ್ ಪ್ರಕರಣ, ಎಸ್‌ಐಟಿ ತಂಡ ಸಭೆ

ಬೆಂಗಳೂರು, ಏ.29- ಹಾಸನ ಸಂಸದ ಪ್ರಜ್ವಲ್‌ ರೇವಣ್ಣಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌ ಸಂಬಂಧದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಇಂದು ಸಭೆ ನಡೆಸಿತು. ನಗರದ ಸಿಐಡಿ ಪ್ರಧಾನ ಕಚೇರಿಯಲ್ಲಿ ಎಸ್‌‍ಐಟಿ ಮುಖ್ಯಸ್ಥರಾದ ಬಿ.ಕೆ. ಸಿಂಗ್‌ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಐಪಿಎಸ್‌‍ ಅಧಿಕಾರಿಗಳಾದ ಸುಮನ್‌ ಡಿ. ಪೆನ್ನೇಕರ್‌, ಸೀಮಾ ಲಾಟ್ಕರ್‌ ಭಾಗವಹಿಸಿದ್ದರು.

ಸಭೆಯಲ್ಲಿ ಪ್ರಮುಖವಾಗಿ ವಿಶೇಷ ತನಿಖಾ ತಂಡದಲ್ಲಿ ಎಷ್ಟು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರಬೇಕು, ಯಾವ ರ್ಯಾಂಕ್‌ನ ಅಧಿಕಾರಿಗಳು ಇರಬೇಕು, ಯಾರ್ಯಾರನ್ನು ಈ ತಂಡಕ್ಕೆ ನೇಮಿಸಿಕೊಳ್ಳಬೇಕು, ಯಾವ ಯಾವ ವಿಭಾಗಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತೆಗೆದುಕೊಳ್ಳಬೇಕು, ಯಾವ ರ್ಯಾಂಕ್‌ನ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ನೇಮಿಸಿಕೊಳ್ಳಬೇಕು, ತನಿಖೆ ಯಾವ ಸ್ವರೂಪದಲ್ಲಿರಬೇಕು ಎಂಬಿತ್ಯಾದಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಪ್ರಕರಣ ಗಣ್ಯ ವ್ಯಕ್ತಿಗಳಿಗೆ ಸೇರಿದ್ದರಿಂದ ಬಹಳ ಸೂಕ್ಷ್ಮ ತೆಯಿಂದ ತನಿಖೆ ಮಾಡಬೇಕು, ತನಿಖೆ ಆರಂಭಿಸುವ ಮುನ್ನ ಯಾವ ಯಾವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕು, ಸಂಗ್ರಹಿಸಿದ ಸಾಕ್ಷ್ಯಗಳನ್ನು ಎಫ್‌ಎಸ್‌‍ಎಲ್‌ ಗೆ ಕಳುಹಿಸಬೇಕು. ನಂತರ ವರದಿ ತರಿಸಿಕೊಳ್ಳಬೇಕು ಎಂಬ ವಿಷಯಗಳ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದರು ಎಂದು ಗೊತ್ತಾಗಿದೆ.

ತದನಂತರದಲ್ಲಿ ಯಾರ್ಯಾರನ್ನು ವಿಚಾರಣೆಗೆ ಒಳಪಡಿಸಬೇಕು, ಯಾರ್ಯಾರಿಗೆ ನೋಟಿಸ್‌‍ ಕೊಡಬೇಕು, ಸಂತ್ರಸ್ತೆಯರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುವುದು, ಈ ಪ್ರಕರಣ ಸಂಬಂಧ ಎಷ್ಟು ದೂರುಗಳು ದಾಖಲಾಗಿವೆ. ಎಲ್ಲಾ ದೂರುಗಳನ್ನು ಆಧರಿಸಿ ಒಟ್ಟಾಗಿ ತನಿಖೆ ಮಾಡಬೇಕಾ ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ನಂತರದ ದಿನಗಳಲ್ಲಿ ಈ ತಂಡ ಹಾಸನಕ್ಕೆ ತೆರಳಿ ತನಿಖೆ ಕೈಗೊಳ್ಳಲಿದೆ.ಏನಿದು ಪ್ರಕರಣ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಾಸನದಲ್ಲಿ ಹರಿದಾಡುತ್ತಿದ್ದು, ರಾಜ್ಯ ಮಹಿಳಾ ಆಯೋಗ ಪ್ರಕರಣವನ್ನು ಎಸ್‌‍ಐಟಿ ತನಿಖೆಗೆ ವಹಿಸಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದೆ.

RELATED ARTICLES

Latest News