ಬೆಂಗಳೂರು,ಏ.30– ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡಿಸುವ ಪೋಷಕರು ಅವರ ಕಾರ್ಯ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕೆಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿದ್ದಾರೆಯೇ? ಆನ್‌ಲೈನ್ ಗೇಮ್ ಗೀಳಿಗೆ ಬಿದ್ದಿದ್ದಾರೆಯೇ? ಎಂಬುದರ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದರು.
ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸಿ ಸಮಂಜಸವಾದ ಮಾರ್ಗದರ್ಶನ ಮತ್ತು ಪೋಷಣೆಯನ್ನು ಮಾಡಬೇಕೆಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಇತ್ತೀಚೆಗೆ ಆರ್‌ಆರ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನೊಬ್ಬ ಆನ್‌ಲೈನ್ ಗೇಮ್‌ಗಳಲ್ಲಿ ತೊಡಗಿರುವುದನ್ನು ತಮ್ಮ ಪೋಷಕರ ಬಳಿ ಹೇಳುವುದಾಗಿ ಅವನ ಸ್ನೇಹಿತರೇ ಬೆದರಿಸಿ ಅವರ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣವನ್ನು ಪಡೆದುಕೊಂಡು ವಂಚಿಸಿದ್ದಾರೆ. ಇಂತಹ ವಿಚಾರಗಳಲ್ಲಿ ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕೆಂದು ಸೂಚನೆ ನೀಡಿದರು.