ಬೆಂಗಳೂರು, ಮೇ.1- ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ ತನಿಖಾ ತಂಡ ತನಿಖೆಯನ್ನು ಚುರುಕುಗೊಳಿದೆ. ಸಿಐಡಿ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದ ಎಸ್‌ಐಟಿ ತಂಡ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ನಾನಾ ಆಯಾಮಾಗಳಲ್ಲಿ ತನಿಖೆ ನಡೆಸುತ್ತಿದೆ.
ಈ ಹಗರಣದಲ್ಲಿ ನಡೆದಿದೆ ಎನ್ನಲಾಗ ಲೈಂಗಿಕ ದೌರ್ಜನ್ಯ, ಅಶ್ಲೀಲ ದೃಶ್ಯ ಚಿತ್ರೀಕರಣ, ವಿಡಿಯೋಗಳ ಹಂಚಿಕೆ ಮತ್ತು ಡೀಪ್‌ಫೇಕ್‌ಗಳು ಮಾಡಿರುವ ಸಾಧ್ಯತೆ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಸಂತ್ರಸ್ತೆಯರು ನೀಡಿದ ದೂರಿನ ಸತ್ಯಾಸತ್ಯತೆ ಪರಾಮರ್ಶೆ ವಿಡಿಯೋಗಳನ್ನು ಪೆನ್‌ಡ್ರೈವ್‌ಗೆ ಹಾಕಿದ್ದು ಯಾರೂ, ಪೆನ್‌ಡ್ರೈವ್‌ಗಳನ್ನು ಹಂಚಿದ್ದು ಯಾರು, ಎಂಬ ಮೂಲಗಳನ್ನು ಹುಡುಕಲು ಮುಂದಾಗಿರುವ ಎಸ್‌ಐಟಿ ತಂಡವು ಸೂಕ್ಷ್ಮತನಿಖೆಗಾಗಿ ಮೂರು ಉಪತಂಡಗಳನ್ನು ರಚಿಸಿದೆ.
ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಎಸ್ಪಿ ಸುಮನ್ ಡಿ ಪನ್ನೇಕರ್ ಅವರ ನೇತೃತ್ವದ ತಂಡ ತನಿಖೆ ನಡೆಸಲಿದೆ. ಈಗಾಗಲೇ ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದ್ದು, ದೂರುದಾರ ಮಹಿಳೆಯಿಂದ ಯಾವಾಗ ಎಲ್ಲಿ ದೌರ್ಜನ್ಯ ಮಾಡಲಾಗಿದೆ, ಯಾವ ರೀತಿ ದೌರ್ಜನ್ಯ ಎಸಗಲಾಗಿದೆ ಎಂಬ ಮಾಹಿತಿ ಸಂಗ್ರಹಿಸಿ ಸ್ಥಳಕ್ಕೆ ಭೇಟಿ ಮಹಜರು ಮಾಡಲಿದೆ.
ಎಸ್‌ಪಿ ಸೀಮಾ ಲಾಟ್ಕರ್ ಎರಡನೇ ತಂಡವು ವಿಡಿಯೋದಲ್ಲಿರುವ ಸಂತ್ರಸ್ತೆಯರ ವಿಚಾರಣೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳ ಸಂಗ್ರಹ, ಅವುಗಳು ಎಲ್ಲಿಂದ ಅಪ್‌ಲೌಡ್ ಆಗಿವೆ ಎಂಬುದರ ಬಗ್ಗೆ ತನಿಖೆ ನಡೆಸಲಿದೆ. ಈಗಾಗಲೇ ಅಧಿಕಾರಿಗಳು ಸಂತ್ರಸ್ತೆಯರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಈ ತಂಡ ಹಾಸನದಲ್ಲಿಯೇ ಬೀಡುಬಿಟ್ಟು ಸಂತ್ರಸ್ತೆಯರ ಹೇಳಿಕೆ ಪಡೆಯಲು ಸಿದ್ಧತೆ ನಡೆಸಿದೆ. ಎಸ್‌ಐಟಿಯ ಮೂರನೇ ತಂಡದಲ್ಲಿ ಸೈಬರ್‌ಕ್ರೈಂ ತಂಡ ಕಾರ್ಯನಿರ್ವಹಿಸಲಿದ್ದು ಎಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ್ದು ಯಾರು, ಪೆನ್‌ಡ್ರೈವ್‌ಗಳನ್ನು ಹಂಚಿದ್ದು ಯಾರು, ಪೆನ್‌ಡ್ರೈವ್‌ನಲ್ಲಿ ವಿಡಿಯೋ ಕಾಪಿಯಾಗಿದ್ದು ಎಲ್ಲಿ, ಯಾವ ಕಂಪ್ಯೂಟರ್‌ನಿಂದ ಮೊದಲು ಕಾಪಿಯಾಗಿದೆ. ಇದರ ಸೂತ್ರದಾರರು ಯಾರು ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯಲಿದೆ.
ಸಂಸದ ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿಂದೆ ಯಾರಾ ಕೈವಾಡವಿದೆ, ವಿಡಿಯೋದ ಮೂಲವೇನು ಎಂಬುದು ತನಿಖೆಯ ನಂತರವೇ ಬಯಲಾಗಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರು.
ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೇನರಸೀಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆಗೆ ಈಗಾಗಲೇ ರಾಜ್ಯಸರ್ಕಾರ ಎಸ್‌ಐಟಿ ತಂಡ ರಚಿಸಿದೆ. ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ 18 ಅಧಿಕಾರಿಗಳ ತಂಡ ತನಿಖೆಗೆ ನೇಮಕವಾಗಿದೆ.
ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಸಂಬಂಧಿಸಿದ ಹೈಪ್ರೊಫೈಲ್ ಪ್ರಕರಣ ವಾಗಿರುವುದರಿಂದ ತನಿಖಾ ತಂಡ ಪ್ರತಿಯೊಂದು ವಿಚಾರವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.