ಬೆಂಗಳೂರು, ಮೇ 3- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆಗಳಲ್ಲಿ ಚದುರಿದಂತೆ ನಿನ್ನೆ ಮಳೆಯಾಗಿದ್ದು, ಇನ್ನೂ ನಾಲ್ಕೈದು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ಬಿಸಿಲಿನ ಬೇಗೆಯಿಂದ ಬಸವಳಿದ್ದಿದ್ದ ಬೆಂಗಳೂರಿಗೆ ನಿನ್ನೆ ಸಂಜೆ ಬಿದ್ದ ಮಳೆ ಮುದ ನೀಡಿದೆ. ಕೋಲಾರದ ಕೆಜಿಎಫ್, ಮುಳಬಾಗಿಲು, ಚನ್ನಪಟ್ಟಣ, ಬೆಂಗಳೂರಿನ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ಮಳೆಯಾಗಿದೆ. ಬೆಂಗಳೂರಿನ ಉತ್ತರ ಭಾಗದಲ್ಲಿ ಮಳೆಯಾಗಿಲ್ಲ.
ಮಿಂಚು, ಗುಡುಗು ಹಾಗೂ ಗಾಳಿ ಸಹಿತ ಮಳೆಯಾಗುವುದು ವಾಡಿಕೆಯಾದರೂ ಮುಂಗಾರು ಪೂರ್ವ ಮಳೆಯು ವ್ಯಾಪಕವಾಗಿ ಬೀಳುವುದಿಲ್ಲ. ಚದುರಿದಂತೆ ಅಲ್ಲಲ್ಲಿ ಮಾತ್ರ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಗಳಿದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆಯಲಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನ ತೀವ್ರವಾಗಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 7ರವರೆಗೂ ಮಳೆ ಮುಂದುವರೆಯು ಲಕ್ಷಣಗಳಿವೆ. ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಕೆಲವೆಡೆ ಗುಡುಗು, ಮಿಂಚಿನಿಂದ ಕೂಡಿದ ವಾತಾವರಣ ಉಂಟಾಗಬಹುದು.
ಮಿಂಚು, ಗುಡುಗಿನ ವಾತಾವರಣ ಉಂಟಾದಾಗ ಸಿಡಿಲು ಬಡಿಯುವ ಸಾಧ್ಯತೆ ಇದೆ. ಜನರು ಸುರಕ್ಷಿತವಾಗಿರಬೇಕು. ವಿದ್ಯುತ್ ಕಂಬ, ಮರ, ಲೋಹದ ವಸ್ತುಗಳಿಂದ ದೂರವಿರಬೇಕು. ಮೊಬೈಲ್ ಬಳಸದಿರುವುದು ಒಳ್ಳೆಯದು. ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿರುಬೇಕು ಎಂಬ ಸಲಹೆ ಮಾಡಲಾಗಿದೆ.
ಬೆಂಗಳೂರು ಸುತ್ತ ಮುತ್ತ ಮೇ 6 ಮತ್ತು 7 ರಂದು ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಮಳೆಯಾದರೂ ತಾಪಮಾನ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ ಜನರು ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷಾತ ಕ್ರಮಗಳನ್ನು ಅನುಸರಿಸುವಂತೆ ಹವಾಮಾನ ಇಲಾಖೆ ಸಲಹೆ ಮಾಡಿದೆ.