ಬೆಂಗಳೂರು, ಮೇ.3- ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರಿಗೆ 2ನೇ ಬಾರಿಗೆ ನೋಟೀಸ್ ನೀಡ ಲಾಗಿದ್ದು, ಅದಕ್ಕೂ ಪ್ರತಿಕ್ರಿಯಿಸದೇ ಇದ್ದರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಮತ್ತು ಪ್ರಜ್ವಲ್ ರೇವಣ್ಣ ಅವರಿಗಿ ರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿ ಸಲು ಪ್ರಧಾನಿಯವರಿಗೆ ಪತ್ರ ಬರೆಯಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಆರ್‌ಪಿಸಿ ಸೆಕ್ಷನ್ 41-ಎ ಅಡಿ ಈಗಾಗಲೇ ನೋಟೀಸ್ ನೀಡಲಾಗಿತ್ತು. ಇದಕ್ಕೆ ಪ್ರಜ್ವಲ್ ಪರವಾದ ವಕೀಲರು ಪತ್ರ ಬರೆದು ಒಂದು ವಾರ ಸಮಯ ಕೇಳಿದ್ದರು. ರೇವಣ್ಣ ಅವರೂ ಕಾಲಾವಕಾಶ ಕೇಳಿದ್ದರು. ಕಾನೂನು ಪರಿಶೀಲನೆ ನಡೆಸಿದ ಎಸ್‌ಐಟಿ ಸಮಯಾವಕಾಶ ನೀಡಲು ನಿರಾಕರಿಸಿದೆ.
ಜೊತೆಯಲ್ಲಿ ಎರಡನೇ ನೋಟೀಸ್ ನೀಡಿದೆ. ಅದರನುಸಾರ ಮತ್ತೆ 24 ಗಂಟೆ ಕಾಲಾವಕಾಶ ನೀಡಲಾಗಿದ್ದು, ವಿಚಾರಣೆಗೆ ಇಬ್ಬರೂ ಹಾಜರಾಗಬೇಕು ಎಂದು ಹೇಳಿದರು. ಸಂಸದ ಪ್ರಜ್ವಲ್‌ಗೆ ವಿಶೇಷ ಅವಕಾಶದಲ್ಲಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಇದೆ. ಅದನ್ನು ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.
ಪಾಸ್‌ಪೋರ್ಟ್ ರದ್ದು ಮಾಡಲು ನ್ಯಾಯಾಲಯದ ಅನುಮತಿ ಅಗತ್ಯ ಎಂಬ ವಿದೇಶಾಂಗ ಸಚಿವಾಲಯದ ಹೇಳಿಕೆ ಸರಿಯಿದೆ. ನಾವು ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೇಳುತ್ತಿಲ್ಲ. ನಾವು ರಾಜತಾಂತ್ರಿಕ ಅವಕಾಶಗಳನ್ನಷ್ಟೇ ರದ್ದು ಮಾಡಲು ಮನವಿ ಮಾಡಿದ್ದೇವೆ. ಆ ವಿಷಯವಾಗಿ ಪ್ರಧಾನಿಯವರು ನಿರ್ಧಾರ ತೆಗೆದುಕೊಳ್ಳಬಹುದು ಎಂದು ವಿವರಿಸಿದರು.
ಪ್ರಜ್ವಲ್ ರೇವಣ್ಣ ಅವರ ಫೋಟೊಸಹಿತವಾಗಿ ಲುಕ್‌ಔಟ್ ನೋಟೀಸ್ ಜಾರಿ ಮಾಡಿದ್ದು, ಎಲ್ಲಾ ವಿಮಾನ ನಿಲ್ದಾಣ ಹಾಗೂ ಬಂದರುಗಳಿಗೆ ರವಾನೆ ಮಾಡಲಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪ್ರಜ್ವಲ್ ಜರ್ಮನಿಗೆ ಪ್ರಯಾಣಿಸಿದ್ದಾನೆ. ಅನಂತರ ಅಲ್ಲಿಂದ ಆತ ಎಲ್ಲಿಗೆ ಹೋಗಿದ್ದಾನೆ ಎಂಬ ವಿವರಗಳಿಲ್ಲ ಎಂದರು.
ಸದ್ಯಕ್ಕೆ ಪ್ರಜ್ವಲ್ ರೇವಣ್ಣಗೆ 2ನೇ ನೋಟೀಸ್ ನೀಡಲಾಗಿದ್ದು, ಆತ ಎಲ್ಲಿದ್ದಾನೆ ಎಂದು ಪರಿಶೀಲನೆ ನಡೆಸಲು ರಾಜ್ಯಸರ್ಕಾರದ ಅಧಿಕಾರಿಗಳಿಗೆ ಅಕಾರವಿಲ್ಲ. ಕೇಂದ್ರ ಸರ್ಕಾರ ಅದನ್ನು ಮಾಡಬೇಕು. ನಮ್ಮ ವ್ಯಾಪ್ತಿಯಲ್ಲಿ ನಾವು ಅಧಿಕಾರಿಗಳನ್ನು ಕಳುಹಿಸಿ ಪ್ರಜ್ವಲ್‌ನನ್ನು ವಿದೇಶದಲ್ಲಿ ಬಂಧಿಸಿ ಕರೆತರುವ ಬಗ್ಗೆ ಪ್ರಯತ್ನ ಮಾಡಬಹುದು. ಆದರೆ ನೋಟೀಸ್‌ನ ಅವಧಿ ಮುಗಿದ ಬಳಿಕ ಈ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಯಲಿದೆ.
ಕಾನೂನಿನ ಪ್ರಕಾರ, ಆರೋಪಿಗಳಿಗೆ ಕಾಲಾವಕಾಶ ನೀಡುವುದು ಅನಿವಾರ್ಯವಿದೆ ಎಂದು ಹೇಳಿದರು.ಈ ನಡುವೆ ಮೈಸೂರಿನ ಪೊಲೀಸ್ ಠಾಣೆಯೊಂದರಲ್ಲಿ ಸಂತ್ರಸ್ತೆಯೊಬ್ಬರ ಪುತ್ರನೊಬ್ಬ ತಮ್ಮ ತಾಯಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿರುವ ಬಗ್ಗೆಯೂ ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈಗ ಒಂದೊಂದೇ ವಿಚಾರಗಳು ಹೊರಬರುತ್ತಿವೆ. ಇನ್ನೂ ಕೆಲ ಮಹಿಳೆಯರು ಹೇಳಿಕೆ ನೀಡಬೇಕಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಪೆನ್‌ಡ್ರೈವ್ ಬಹಿರಂಗಗೊಳಿಸಿದವರು ಯಾರು? ಇದರ ಹಿಂದೆ ಯಾರಿದ್ದಾರೆ ಎಂಬ ವಿಚಾರಗಳನ್ನು ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಾರೆ. ಪೆನ್‌ಡ್ರೈವ್ ಅನ್ನು ಬಹಿರಂಗಗೊಳಿಸಿದವರು ಎಂದು ಹೇಳಲಾದ ಕಾರ್ತಿಕ್ ಎಲ್ಲಿದ್ದಾನೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿರುವ ಬಗ್ಗೆಯೂ ತಮಗೆ ವಿವರ ಇಲ್ಲ ಎಂದು ಸ್ಪಷ್ಟಪಡಿಸಿದರು.ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾನು ಗೃಹಸಚಿವನಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕಿದೆ. ಹೀಗಾಗಿ ರಾಜಕೀಯ ಹೇಳಿಕೆಗಳನ್ನು ನೀಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕೀಯವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ತಿಳಿಸಿದರು.
ಪೆನ್‌ಡ್ರೈವ್‌ನಲ್ಲಿನ ವಿಡಿಯೋಗಳಲ್ಲಿನ ಸಂತ್ರಸ್ತರ ಬಗ್ಗೆ ಸೂಕ್ಷ್ಮವಾಗಿ ನಡೆದುಕೊಳ್ಳಬೇಕಿದೆ. ಹೇಳಿಕೆ ನೀಡಲು ಧೈರ್ಯವಾಗಿ ಮುಂದೆ ಬನ್ನಿ. ಎಲ್ಲಾ ರೀತಿಯ ರಕ್ಷಣೆಯನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಎಸ್‌ಐಟಿ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಇದು ಮಹಿಳೆಯರು ಮತ್ತು ಅವರ ಜೀವನದ ಪ್ರಶ್ನೆಯಾಗಿರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಲಾಗುತ್ತಿದೆ ಎಂದರು.
ಸಾವಿರಾರು ವಿಡಿಯೋಗಳು ಇರುವುದರಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಗಣಿಸಬೇಕಿದೆ. ಹೀಗಾಗಿ ಕಾಲಾವಕಾಶವೂ ಅಗತ್ಯ ಎಂದು ಗೃಹಸಚಿವರು ತಿಳಿಸಿದರು.ಸಂತ್ರಸ್ತೆ ನೀಡಿದ ದೂರು ಆಧರಿಸಿ ಅನ್ವಯವಾಗುವ ಸೆಕ್ಷನ್‌ಗಳನ್ನು ದಾಖಲಿಸಲಾಗಿತ್ತು. ನಿನ್ನೆ ಮಹಿಳೆಯೊಬ್ಬರು ನೀಡಿದ ಹೇಳಿಕೆಗಳು ಬೇರೆಬೇರೆ ಸೆಕ್ಷನ್‌ಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಎಸ್‌ಐಟಿ ಅಕಾರಿಗಳು ಅದರ ಅನುಸಾರ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.