Friday, November 22, 2024
Homeರಾಜ್ಯಹಾಸನ ಪೆನ್ ಡ್ರೈವ್ ಪ್ರಕರಣದ ಆರೋಪಿಗಳಿಗೆ ಕೇಂದ್ರ ಸರ್ಕಾರ ರಕ್ಷಣೆ : ಸಿಎಂ ಆರೋಪ

ಹಾಸನ ಪೆನ್ ಡ್ರೈವ್ ಪ್ರಕರಣದ ಆರೋಪಿಗಳಿಗೆ ಕೇಂದ್ರ ಸರ್ಕಾರ ರಕ್ಷಣೆ : ಸಿಎಂ ಆರೋಪ

ಬಾಗಲ ಕೋಟೆ, ಮೇ.3- ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿರುವುದಷ್ಟೇ ಅಲ್ಲ, ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು, ಕೇಂದ್ರ ಸರ್ಕಾರ ವಿದೇಶಕ್ಕೆ ಪರಾರಿಯಾಗಿರುವ ಆರೋಪಿಯನ್ನು ರಕ್ಷಣೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ಅವರ ವಿಡಿಯೋಗಳು ಸಾರ್ವಜನಿಕವಾಗಿ ಬಹಿರಂಗಗೊಂಡಿವೆ. ಸಂತ್ರಸ್ತೆಯೊಬ್ಬರು ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಮಹಿಳೆ ಸುಳ್ಳು ಹೇಳಿಕೆ ನೀಡುವುದಿಲ್ಲ. ಆ ರೀತಿ ಹೇಳುವುದರಿಂದ ಬದುಕು ಹಾಳಾಗುತ್ತದೆ ಎಂದು ಸಂತ್ರಸ್ತರಿಗೆ ಗೊತ್ತಿರುತ್ತದೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ಮಹಿಳೆಯ ಹೇಳಿಕೆ ಮೇಲೆ ನಂಬಿಕೆ ಇಡಲಾಗುತ್ತದೆ ಎಂದು ಹೇಳಿದರು.

ಬಿಜೆಪಿಯವರು ತಪ್ಪು ಮಾಡಿದ್ದಾರೆ. ಅವರಿಗೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಆದರೂ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಪ್ರಜ್ವಲ್‌ಗೆ ಜೆಡಿಎಸ್‌ನವರು ಟಿಕೆಟ್‌ ನೀಡಿದ್ದರು, ಈಗ ಪ್ರಕರಣದ ಬಗ್ಗೆ ತಮ್ಮ ನಿಲುವನ್ನು ಹೇಳಲಿ ಎಂದು ಬಿಜೆಪಿ ನಾಯಕರಿಗೆ ಆಗ್ರಹಿಸಿದರು.

ತಾವು ಪ್ರಧಾನಿಯವರಿಗೆ ಪತ್ರ ಬರೆದಿದ್ದು, ಪ್ರಜ್ವಲ್‌ಗೆ ಇರುವ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಂಡರೆ ಪ್ರಜ್ವಲ್‌ ವಿದೇಶದಲ್ಲಿರಲು ಸಾಧ್ಯವಿಲ್ಲ. ಸ್ವದೇಶಕ್ಕೆ ಮರಳಲೇಬೇಕಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರ ವಿದೇಶಿ ಪ್ರಯಾಣದ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ಇದ್ದೇ ಇರುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್‌ ವೀಸಾ ಪರಿಶೀಲನೆ ನಡೆಯಬೇಕು. ಯಾರ್ಯಾರು, ಯಾವ ದೇಶಕ್ಕೆ ಪ್ರಯಾಣಿಸುತ್ತಾರೆ, ಯಾರೊಂದಿಗೆ ಹೋಗುತ್ತಾರೆ ಎಂಬ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಪ್ರಜ್ವಲ್‌ ಪ್ರಯಾಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ?, ಹಾಗಿದ್ದರೆ ಯಾರು ಬೇಕಾದರೂ ದೇಶಕ್ಕೆ ಬರಲು, ಹೋಗಲು ಅವಕಾಶವಿದೆಯೇ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಪ್ರಜ್ವಲ್‌ ರೇವಣ್ಣನನ್ನು ರಕ್ಷಣೆ ಮಾಡುತ್ತಿದೆ. ಆತ ಎಲ್ಲೇ ಅಡಗಿದ್ದರೂ ರಾಜ್ಯಸರ್ಕಾರ ಬಂಧಿಸಿ ಕರೆತರಲಿದೆ. ಪ್ರಜ್ವಲ್‌ ಪ್ರಕರಣದಲ್ಲಿ ಎಚ್‌.ಡಿ.ಕುಮಾರಸ್ವಾಮಿ ನುಣುಚಿಕೊಳ್ಳುತ್ತಿದ್ದಾರೆ. ಹಾಸನದ ಚುನಾವಣಾ ಪ್ರಚಾರದಲ್ಲಿ ಪ್ರಜ್ವಲ್‌ನನ್ನು ತಮ್ಮ ಪುತ್ರ ಎಂದು ಹೇಳಿಕೊಂಡಿದ್ದರು. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ನನ್ನ ಕುಟುಂಬ ಬೇರೆ, ರೇವಣ್ಣ ಕುಟುಂಬ ಬೇರೆ ಎಂದು ಜಾರಿಕೊಂಡರು. ಆದರೆ ನಿನ್ನೆ ಎಚ್‌.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರು ತಮ್ಮ ಮನೆಗೆ ವಕೀಲರನ್ನು ಕರೆಸಿ ಚರ್ಚೆ ಮಾಡಿದ್ದಾರೆ. ರಾಜಕೀಯ ಅಥವಾ ಕುಕೃತ್ಯ ಏನೇ ಇದ್ದರೂ ಅವರೆಲ್ಲಾ ಒಟ್ಟಿಗೇ ಸೇರಿ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ, ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಗಳ ಮೇಲೆ ನಂಬಿಕೆಯಿಲ್ಲ. ಅಮಾಯಕರಿಗೆ ಕಿರುಕುಳ ನೀಡುವುದು ಅವರ ಉದ್ದೇಶ. ರಾಜಕೀಯಕ್ಕಾಗಿ ಅಮಾಯಕರು ಕಣ್ಣೀರು ಹಾಕಬೇಕು ಎಂದು ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಮಾಡಬಾರದ್ದನ್ನು ಬಿಜೆಪಿಯವರು ಮಾಡುತ್ತಾರೆ. ಸಾಮಾಜಿಕ ನ್ಯಾಯ, ಮೀಸಲಾತಿ, ದೇಶದ ಐಕ್ಯತೆ, ಸಮಾನತೆ ಮೇಲೆ ಬಿಜೆಪಿಯವರಿಗೆ ನಂಬಿಕೆಯಿಲ್ಲ. ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಾರೆೆ ಎಂದು ವಾಗ್ದಾಳಿ ನಡೆಸಿದರು.

ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಣ ಮಾಡಲಾಗಿದೆ ಎಂಬ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ಪರಿಶೀಲನೆ ನಡೆಸಿ, ನಾಪತ್ತೆಯಾಗಿರುವ ಮಹಿಳೆಯನ್ನು ಕರೆತರುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

RELATED ARTICLES

Latest News