Tuesday, May 21, 2024
Homeರಾಜ್ಯಪೆನ್‌ಡ್ರೈವ್‌ ಪ್ರಕರಣ : ಹೊಳೇನರಸೀಪುರದಲ್ಲಿ ಎಸ್‌ಐಟಿ ತಂಡ ಪರಿಶೀಲನೆ

ಪೆನ್‌ಡ್ರೈವ್‌ ಪ್ರಕರಣ : ಹೊಳೇನರಸೀಪುರದಲ್ಲಿ ಎಸ್‌ಐಟಿ ತಂಡ ಪರಿಶೀಲನೆ

ಹಾಸನ, ಮೇ 3- ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು ಮುಂಜಾನೆ ಐದು ವಾಹನಗಳಲ್ಲಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದು ಮುಂಜಾನೆ 3.15ರ ಸುಮಾರಿಗೆ ಹಾಸನ ಜಿಲ್ಲೆಗೆ ಎಸ್‌ಪಿ ಸೀಮಾ ಲಾಟ್ಕರ್‌ ಅವರ ನೇತೃತ್ವ ತಂಡ ಭೇಟಿ ನೀಡಿ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಸೇರಿದ ಫಾರ್ಮ್‌ಹೌಸ್‌ ಹಾಗೂ ತಾಲೂಕಿನ ಘನ್ನಿಕಡ, ಕಾಮೇನಹಳ್ಳಿ ಗ್ರಾಮದ ಬಳಿ ಇರುವ ಎರಡು ಫಾರ್ಮ್‌ಹೌಸ್‌ಗೆ
ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಫಾರ್ಮ್‌ಹೌಸ್‌ನ ಇಂಚಿಂಚು ಸಹ ಪರಿಶೀಲನೆ ನಡೆಸಿದ ತಂಡದ ಅಕಾರಿಗಳು ಅಶ್ಲೀಲ ವಿಡಿಯೋ ಚಿತ್ರೀಕರಣದ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪಡುವಲಹಿಪ್ಪೆ ಫಾರ್ಮ್‌ಹೌಸ್‌ನಲ್ಲಿ ಅಸ್ಸಾಂ ಹಾಗೂ ಬಿಹಾರ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಹಲವು ನಿಮಿಷಗಳ ಕಾಲ ಆ ಕಾರ್ಮಿಕರಿಂದ ಎಸ್‌ಐಟಿ ಅಧಿಕಾರಿಗಳು ಮಾಹಿತಿಗಳನ್ನು ಕಳೆದುಕೊಂಡಿದ್ದಾರೆ.

ಸಂಸದ ಪ್ರಜ್ವಲ್‌ ರೇವಣ್ಣ ಎಷ್ಟು ದಿನಕ್ಕೊಮ್ಮೆ ಈ ಫಾರ್ಮ್‌ಹೌಸ್‌ಗೆ ಬರುತ್ತಿದ್ದರು. ಯಾವ ಸಮಯದಲ್ಲಿ ಬರುತ್ತಿದ್ದರು. ಇಲ್ಲಿಗೆ ಬಂದಾಗ ಉಳಿದುಕೊಳ್ಳುತ್ತಿದ್ದರೆ, ಅವರೊಬ್ಬರೇ ಬರುತ್ತಿದ್ದರಾ ಎಂಬಿತ್ಯಾದಿ ಹಲವು ಮಾಹಿತಿಗಳನ್ನು ವಿಶೇಷ ತಂಡ ಕಲೆ ಹಾಕಿದೆ.ವಿಡಿಯೋ ಚಿತ್ರೀಕರಣ ನಡೆದಿದೆ ಎನ್ನುವ ಬಗ್ಗೆ ಎಸ್‌ಐಟಿ ತಂಡ ಮಾಹಿತಿ ಸಂಗ್ರಹಿಸಿರುವ ಜೊತೆಗೆ ಹಲವು ಮಾಹಿತಿಗಳನ್ನು ಸಹ ಕಲೆ ಹಾಕಿ ತಂಡ ತೆರಳಿದೆ.

ಚುನಾವಣಾ ಮುಗಿದ ಕೆಲವೇ ಗಂಟೆಗಳಲ್ಲಿ ಪ್ರಜ್ವಲ್‌ಗೆ ಸೇರಿದ್ದು ಎನ್ನಲಾದ ಪೆನ್‌ಡ್ರೈವ್‌ ಎಲ್ಲಾ ಕಡೆ ಹರಿದಾಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೊಬ್ಬರು ರೇವಣ್ಣ ಹಾಗೂ ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು.

ಈ ಪ್ರಕರಣದ ಗಂಭೀರತೆ ಅರಿತು ತನಿಖೆಗಾಗಿ ಎಸ್‌ಐಟಿಗೆ ವಹಿಸಲಾಗಿದ್ದು, ಇಂದು ವಿಶೇಷ ತನಿಖಾ ತಂಡ ಹಾಸನ ಜಿಲ್ಲೆಗೆ ಭೇಟಿ ನೀಡಿ ಹಲವು ಮಾಹಿತಿಗಳನ್ನು ಕಲೆ ಹಾಕಿದೆ.

RELATED ARTICLES

Latest News