Friday, November 22, 2024
Homeರಾಜ್ಯಭಾರೀ ಮಳೆ ನಿರೀಕ್ಷೆ : ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮಕ್ಕೆ ಕಂದಾಯ ಇಲಾಖೆ ಸುತ್ತೋಲೆ

ಭಾರೀ ಮಳೆ ನಿರೀಕ್ಷೆ : ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮಕ್ಕೆ ಕಂದಾಯ ಇಲಾಖೆ ಸುತ್ತೋಲೆ

ಬೆಂಗಳೂರು,ಮೇ 6- ಬಿರುಬೇಸಿಗೆ, ಬಿಸಿಗಾಳಿ, ಉಷ್ಣಾಂಶ ಏರಿಕೆಯಿಂದ ಜನಸಾಮಾನ್ಯರು ಬಳಲುತ್ತಿರುವ ಸಂದರ್ಭದಲ್ಲೇ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ಮಳೆ ಸುರಿಯುವ ನಿರೀಕ್ಷೆಯಿದ್ದು, ಇದರಿಂದಾಗುವ ಅನಾಹುತಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಒಟ್ಟು 13 ಅಂಶಗಳ ಸೂಚನೆಗಳನ್ನು ಪ್ರಾದೇಶಿಕ ಆಯೋಜಕರು, ಜಿಲ್ಲಾಧಿ ಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳಿಗೆ ರವಾನೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಏ.15 ರಂದು ನೀಡಿರುವ ನೈಋತ್ಯಮುಂಗಾರಿನ ಮುನ್ಸೂಚನೆ ಪ್ರಕಾರ, ದೇಶಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಾಗಿ ಮಳೆಯಾಗುವ ನಿರೀಕ್ಷೆಯಿದೆ. ಸರಾಸರಿ ಶೇ.104ಕ್ಕಿಂತ ಹೆಚ್ಚು ಮಳೆಯನ್ನು ಅಂದಾಜಿಸಲಾಗಿದ್ದು, ಕರ್ನಾಟಕ ಸೇರಿದಂತೆ ಭಾರತದ ಪರ್ಯಾಯ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯ ಸಾಧ್ಯತೆಯಿದೆ.

ವಾಡಿಕೆಗಿಂತ ಹೆಚ್ಚಿನ ಮಳೆಯುಂಟಾದಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಹಾನಿಯನ್ನು ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಲಾಗಿದೆ.

ಕಂದಾಯ, ನಗರಾಭಿವೃದ್ಧಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌, ಜಲಸಂಪನ್ಮೂಲ ಇಲಾಖೆಗಳ ಸಹಯೋಗದೊಂದಿಗೆ ಕೆಲಸ ಮಾಡಬೇಕು. ವಿಪತ್ತಿಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಿ ಅರಿವು ಮೂಡಿಸಬೇಕು. ತುರ್ತು ಸ್ಪಂದನೆಗೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕೇಂದ್ರಗಳನ್ನು ಸ್ಥಾಪಿಸಿ ತಂಡಗಳನ್ನು ರಚಿಸಬೇಕು.

ವಿಪತ್ತು ನಿರ್ವಹಣೆಯಲ್ಲಿ ತೊಡಗುವ ಅಧಿ ಕಾರಿಗಳ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿ ಕಾಲಕಾಲಕ್ಕೆ ಮಾಹಿತಿ ನಿರ್ಣಯ ಮಾಡಿಕೊಳ್ಳಬೇಕು. ದೂರ ಸಂಪರ್ಕ ಸೇವೆ ಪೂರೈಕೆದಾರರೊಂದಿಗೆ ಸಭೆ ನಡೆಸಿ ಹಾನಿಗೊಳಗಾದ ಸೇವೆಗಳನ್ನು ತಕ್ಷಣ ದುರಸ್ತಿಗೊಳಿಸಲು ಸೂಚಿಸಬೇಕು ಎಂದು ಸಲಹೆ ನೀಡಲಾಗಿದೆ.

ನದಿ ಹಾಗೂ ಜಲಾಶಯ ನೀರಿನ ಹರಿವು ಹಾಗೂ ತಗ್ಗು ಪ್ರದೇಶಗಳಲ್ಲಿನ ಜನರಿಗೆ ತುರ್ತು ಸಂದರ್ಭಗಳಲ್ಲಿ ಮಾಹಿತಿ ನೀಡಬೇಕು. ತಂತ್ರಜ್ಞಾನದ ಬಳಕೆ ಮಾಡಿಕೊಂಡು ವರುಣ ಮಿತ್ರ ಸಹಾಯವಾಣಿ, ಸಿಡಿಲು ಆ್ಯಪ್‌, ದಾಮಿನಿ ಆ್ಯಪ್‌ ಮುಂತಾದವುಗಳ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಬೇಕು.

ಪರಿಹಾರ, ಪುನರ್‌ ವಸತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಚರಂಡಿಗಳು, ಕಾಲುವೆಗಳ ಹೂಳೆತ್ತಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಭೂಕುಸಿತ ಪ್ರದೇಶಗಳಲ್ಲಿ ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸುವುದು, ವಿದ್ಯುತ್‌ ಸರಬರಾಜು ವ್ಯತ್ಯಯಗೊಳ್ಳದಂತೆ ಆರೋಗ್ಯ ಕಾಳಜಿ, ಪಶುಸಂಗೋಪನೆ ಸೇರಿದಂತೆ ಹಲವು ವಿಚಾರಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ.

RELATED ARTICLES

Latest News