ಇಂಫಾಲ, ಮೇ 6- ಭಾರಿ ಮಳೆಯಿಂದಾಗಿ ಮಣಿಪುರ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳನ್ನು 2 ದಿನ ಮುಚ್ಚುವಂತೆ ಮಣಿಪುರ ಸರ್ಕಾರ ಘೋಷಿಸಿದೆ. ರಾಜ್ಯದಲ್ಲಿ ಭಾರೀ ಮಳೆ ಸುರಿದಿದ್ದು, ಇಂಫಾಲ್ ಪಶ್ಚಿಮ ಜಿಲ್ಲೆಯ ಕಾಂಚೀಪುರ ಮತ್ತು ತೇರಾ ಮತ್ತು ತೌಬಾಲ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾನುವಾರ ಶುರುವಾದ ಆಲಿಕಲ್ಲು ಮಳೆಯಿಂದಾಗಿ ರಾಜ್ಯದಾದ್ಯಂತ ಅನೇಕ ಕಡೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನಿರ್ದೇಶನಾಲಯವು ಹೊರಡಿಸಿದ ಆದೇಶದಲ್ಲಿ ಶಿಕ್ಷಣ ಸಮಸ್ತೆಗಳನ್ನು ಮುಚ್ಚಲು ತಿಳಿಸಿದೆ.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಪ್ರಸ್ತುತ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಅಪಾಯಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮನೆಯೊಳಗೆ ಸುರಕ್ಷಿತವಾಗಿರಲು ನಾನು ಎಲ್ಲರನ್ನು ಕೋರುತ್ತೇನೆ. ರಾಜ್ಯ ಸರ್ಕಾರವು ಎಲ್ಲ ಸುರಕ್ಷತಾ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ, ವಿಶೇಷವಾಗಿ ಇಂಫಾಲ್ ಕಣಿವೆಯಲ್ಲಿ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಯಿಂದಾಗಿ ನೂರಾರು ಮನೆಗಳಿಗೆ ಹಾನಿಯಾಗಿದೆ.ಇದರ ಬಗ್ಗೆ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರವು ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.