ಮೈಸೂರು, ಮೇ 8- ಪೆನ್‌ಡ್ರೈವ್ ಬಹಿರಂಗಗೊಂಡ ಪ್ರಕರಣದಲ್ಲಿ ಬಿಜೆಪಿ ನಾಯಕ ದೇವರಾಜೇಗೌಡ ಪಾತ್ರ ಏನು, ಎಷ್ಟು ಹಣ ಪಡೆದರು, ನಗದಾಗಿ ಎಷ್ಟು, ಆನ್‌ಲೈನ್‌ನಲ್ಲಿ ಎಷ್ಟು ತೆಗೆದುಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ. ಒಂದೊಂದಾಗಿ ಬಹಿರಂಗಗೊಳಿಸುತ್ತೇವೆ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಕೃತ್ಯದ ಬಗ್ಗೆ ಚರ್ಚೆ ಮಾಡದೇ ಪೆನ್‌ಡ್ರೈವ್ ಬಹಿರಂಗ ಪಡಿಸಿದ್ದವರ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಲಾಗುತ್ತಿದೆ. ಕೊಲೆಯಾದಾಗ ಪ್ರಾಣ ಹಾನಿ ಮುಖ್ಯವಾಗುತ್ತದೋ, ಕೃತ್ಯಕ್ಕೆ ಬಳಸಿದ ಕತ್ತಿ ತಯಾರು ಮಾಡಿದ ವ್ಯಕ್ತಿ ಮುಖ್ಯವೋ ಎಂದು ಪ್ರಶ್ನಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಗಾಜಿನ ಮನೆಯಲ್ಲಿ ಕುಳಿತುಕೊಂಡು ತಮ ವಿರುದ್ಧ ಬೇರೆಯವರು ಕಲ್ಲು ಹೊಡೆಯದಂತೆ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಅದೇ ಗಾಜಿನ ಮನೆಯಲ್ಲಿ ಕುಳಿತು ಕುಮಾರಸ್ವಾಮಿಯವರು ಬೇರೆ ಯಾರ ಮೇಲಾದರೂ ಕಲ್ಲು ಎಸೆಯಬಹುದು. ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರಷ್ಟೆ ಯಾಕೆ, ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಿ ಎಂದು ನಾವು ಕೂಡ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಈಗ ಡಿ.ಕೆ.ಶಿವಕುಮಾರ್ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ ಯಾವ ಪಕ್ಷದವರು, ವಿರೋಧ ಪಕ್ಷದ ನಾಯಕನನ್ನು ಭೇಟಿ ಮಾಡಿಲ್ಲವೇ. ದೇವರಾಜೇಗೌಡನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಗೋತ್ತಾಗಲಿದೆ. 25 ಸಾವಿರ ಪೆನ್‌ಡ್ರೈವ್ ಹಂಚಿದ್ದಾರೆ ಎಂದು ಹೇಳಲಾಗಿದೆ. ಅಷ್ಟು ಪೆನ್‌ಡ್ರೈವ್‌ಗಳನ್ನು ಚಿಕ್ಕಪೇಟೆಯಲ್ಲಿ ಯಾರು ಖರೀದಿಸಿದರು. ಯಾರ ಹೆಸರಿನಲ್ಲಿ ಬಿಲ್ ಮಾಡಿಸಲಾಯಿತು ಎಂಬ ಬಗ್ಗೆ ನಮ ಬಳಿ ಮಾಹಿತಿ ಇದೆ. ಆರ್.ಅಶೋಕ್ ಅವರು ತಾಳೆಯಿಂದ ಇರಲಿ, ಎಲ್ಲವೂ ಹೇಳುತ್ತೇವೆ ಎಂದರು.
ಎಸ್‌ಐಟಿಯಲ್ಲಿ ಆರು ಮಂದಿ ಐಪಿಎಸ್ ಅಧಿಕಾರಿಗಳಿದ್ದಾರೆ. ಪ್ರಾಮಾಣಿಕವಾದ ತನಿಖೆ ನಡೆಯುತ್ತಿದೆ. ಆರಂಭದಲ್ಲೇ ತನಿಖೆಗೆ ಅಡ್ಡಿ ಪಡಿಸುವ ಪ್ರಯತ್ನ ಯಾಕೆ. ದೇಶದಲ್ಲಿ ಬಿಜೆಪಿ 68 ಸದಸ್ಯರ ವಿರುದ್ಧ ಲೈಂಗಿಕ ಸಿಡಿ ಪ್ರಕರಣಗಳಿವೆ. ರಾಜ್ಯದ 14 ಮಂದಿ ವಿರುದ್ಧವೂ ಪ್ರಕರಣಗಳಿವೆ ಎಂದು ಕೆಲವರ ಹೆಸರುಗಳನ್ನು ಲಕ್ಷ್ಮಣ್ ವಿವರಿಸಿದರು.
ಹಾಸನದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಮಿತ್ ಶಾ ಹಾಗೂ ಬಿ.ವೈ. ವಿಜಯೇಂದ್ರರಿಗೆ ದೇವರಾಜೇಗೌಡ ಪತ್ರ ಬರೆದು ಸಿಡಿ ಸಹಿತ ವಿಡಿಯೋ ತಲುಪಿಸಿದ್ದಾರೆ. ದೇವರಾಜೇಗೌಡರಿಗೆ ಅಮಿತ್ ಶಾರನ್ನು ಭೇಟಿ ಮಾಡಿಸಲು ವಿಜಯೇಂದ್ರ ಪ್ರಯತ್ನ ಪಟ್ಟಿದ್ದರು. ಅಮಿತ್ ಶಾ-ವಿಜಯೇದ್ರ 20 ನಿಮಿಷ ಇದೇ ವಿಷಯವಾಗಿ ಚರ್ಚೆ ಮಾಡಿದ್ದಾರೆ. ಆ ವೇಳೆ ದೇವರಾಜೇಗೌಡ ಕೊಠಡಿಯ ಹೊರಗೆ ಕುಳಿತಿದ್ದರು. ವಿಷಯ ತಿಳಿದ ಕಾರಣಕ್ಕೆ ಹಾಸನ ಅಭ್ಯರ್ಥಿಯನ್ನು ಕೊನೆ ಕ್ಷಣದವರೆಗೂ ತಡೆ ಹಿಡಿಯಲಾಗಿತ್ತು ಎಂದರು.
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಾಗಿ 26ರಂದು ಸಂಜೆ 4 ಗಂಟೆಗೆ ಅರ್ಜಿ ಸಲ್ಲಿಸಿದ್ದಾರೆ. 15 ನಿಮಿಷದಲ್ಲಿ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ವಿಸಾ ಸಿದ್ದಗೊಳ್ಳುತ್ತದೆ. ರಾತ್ರಿ 12.30ಕ್ಕೆ ಪ್ರಜ್ವಲ್ ರೇವಣ್ಣ ದೇಶ ಬಿಡುತ್ತಾರೆ. ಇದನ್ನೂ ಕಾಂಗ್ರೆಸ್ ಮಾಡಿದ್ದಾ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ಗೆ ಯಾವ ವಿಷಯವೂ ಗೊತ್ತಿಲ್ಲ. ಕಾಂಗ್ರೆಸ್ ನಾಯಕರನ್ನು ಟೀಕಿಸುವದಷ್ಟೆ ಗೊತ್ತು. ಕುಮಾರಸ್ವಾಮಿಯವರು ಪ್ರಮಾಣಿಕವಾಗಿದ್ದರೆ ಪ್ರಜ್ವಲ್ ರೇವಣ್ಣನನ್ನು ಕರೆಸಿ ತನಿಖಾಧಿಕಾರಿಗಳಿಗೆ ಒಪ್ಪಿಸಿ. ಎಸ್‌ಐಟಿಯ ಮೇಲೆ ನಂಬಿಕೆ ಇಲ್ಲದಿದ್ದರೆ ಸಿಬಿಐ, ಎನ್‌ಐಎ ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಒಪ್ಪಿಸಲು ಜೆಡಿಎಸ್ ನಾಯಕರು ಲಿಖಿತವಾಗಿ ಮನವಿ ನೀಡಲಿ, ಇಲ್ಲವೇ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ಸ್ವಯಂ ಪ್ರೇರಿತ ತನಿಖೆ ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದರು.
ಜೆಡಿಎಸ್‌ನವರು ಇವತ್ತು ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದಾರೆ. ಈ ಪ್ರತಿಭಟನೆ ಯಾಕೆ, ಪ್ರಜ್ವಲ್ ರೇವಣ್ಣ ಮಾಡಿದ್ದು ಸರಿ, ಆತನನ್ನು ಬಂಧಿಸಬಾರದು ಎಂಬ ಒತ್ತಾಯಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆಯೇ. ಪ್ರತಿಭಟನಾಕಾರರು ಬೇಡ ಬೇಡ ತನಿಖೆ ಬೇಡ ಎಂದು ಬಿತ್ತಿ ಪತ್ರ ಹಿಡಿದುಕೊಂಡಿದ್ದಾರೆ. ಪ್ರಕರಣದಲ್ಲಿ 2 ಸಾವಿರಕ್ಕೂ ಹೆಚ್ಚು ವಿಡಿಯೋಗಳಲ್ಲಿ 500ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮಾನ ಅಪಹರಣ ಮಾಡಿದ್ದು ಸರಿ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ಬಿಜೆಪಿಯ ಆರ್.ಅಶೋಕ್, ವಿಜಯೇಂದ್ರ, ಪ್ರೀತಂಗೌಡ, ದೇವರಾಜೇಗೌಡರನ್ನು ಮಂಪರು ಪರೀಕ್ಷೆ ಒಳಪಡಿಸಿದರೆ ಮತ್ತಷ್ಟು ಸತ್ಯಗಳು ಹೊರ ಬರುತ್ತವೆ. ದೇವರಾಜೇಗೌಡರಿಗೆ ಪೈಪೋಟಿ ಮೇಲೆ ಮುಂಗಡ ಕೊಟ್ಟಿದ್ದು ಯಾರು, ಎಷ್ಟು ಹಣ ವರ್ಗಾವಣೆಯಾಗಿದೆ ಎಂಬ ಎಲ್ಲಾ ಮಾಹಿತಿ ತಮ ಬಳಿ ಇವೆ. ಹಂತ ಹಂತವಾಗಿ ಹೊರಗೆ ತರುತ್ತೇವೆ ಎಂದು ಎಚ್ಚರಿಸಿದರು.