ಬೆಂಗಳೂರು,ಮೇ8- ಮಹಿಳೆಯೊಬ್ಬರ ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನಗರದ 17ನೇ ಎಸಿಎಂಎಂ ನ್ಯಾಯಾಲಯ ಒಪ್ಪಿಸಿದೆ.
17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೇವಣ್ಣ ಅವರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ರೇವಣ್ಣ ಅವರನ್ನು ಎಸ್‌ಐಟಿ ವಶಕ್ಕೆ ನೀಡಿದ್ದ ಅವಧಿ ಇಂದಿಗೆ ಮುಗಿದಿತ್ತು. ಕಳೆದ ಶನಿವಾರ ಎಸ್‌ಐಟಿಯಿಂದ ಬಂಧಿಸಲಾಗಿರುವ ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಭಾನುವಾರ ಹಾಜರು ಪಡಿಸಲಾಗಿತ್ತು.
ಅಂದು ನ್ಯಾಯಾಧೀಶರು ರೇವಣ್ಣ ಅವರಿಗೆ ಜಾಮೀನು ನಿರಾಕರಿಸಿ ನಾಲ್ಕು ದಿನಗಳ ಕಾಲ ಎಸ್‌ಐಟಿ ವಶಕ್ಕೆ ಒಪ್ಪಿಸಿದ್ದರು. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ರೇವಣ್ಣ ಅವರನ್ನು ಶನಿವಾರ ಸಂಜೆ ವಶಕ್ಕೆ ಪಡೆದು ನಂತರ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು.
ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ:
ಮಹಿಳೆಯೊಬ್ಬರ ಅಪಹರಣ ಆರೋಪದ ಪ್ರಕರಣದಲ್ಲಿ ಎಸ್‌ಐಟಿ ಬಂಧನಕ್ಕೆ ಒಳಗಾಗಿರು ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿ ಗಳ ವಿಶೇಷ ನ್ಯಾಯಾಲಯವು ನಾಳೆಗೆ ಮುಂದೂಡಿದೆ. ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿ ಒಂದು ವಾರ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಲಾಗಿದೆ.