ಬೆಂಗಳೂರು,ಅ.13- ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಸಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು 40% ಕಮೀಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಐಟಿ ಖೆಡ್ಡಾಕ್ಕೆ ಬಿದ್ದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ಸರ್ಕಾರದಲ್ಲಿ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಸಚಿವರು ಮತ್ತು ಶಾಸಕರು 40% ಕಮೀಷನ್‍ಗೆ ಬೇಡಿಕೆ ಇಟ್ಟಿದ್ದಾರೆಂಬ ಗಂಭೀರ ಆರೋಪ ಮಾಡಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಅಂಬಿಕಾಪತಿ ಮಾಡಿದ್ದ ಈ ಆರೋಪ ಬಿಜೆಪಿ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸಿತ್ತು.
ಪ್ರಧಾನಿ ನರೇಂದ್ರಮೋದಿಯವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘ, ನಿಮ್ಮದೇ ಸರ್ಕಾರ ಇರುವ ಕರ್ನಾಟಕದಲ್ಲಿ ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದಿರುವ ಕಾಮಗಾರಿಗಳ ಹಣ ಬಿಡುಗಡೆಗೆ 40% ಕಮೀಷನ್ ಕೇಳುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪ ಮಾಡಿದ್ದರು.
ಬಾಕಿ ಬಿಲ್ ಪಾವತಿಗೆ ಒಂದು ತಿಂಗಳು ಡೆಡ್‍ಲೈನ್ ನೀಡಿದ ಕೆಂಪಣ್ಣ
ಈ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಅಲೋಲ್ಲ ಕಲ್ಲೋಲವನ್ನೇ ಸೃಷ್ಟಿಸಿ ಪ್ರತಿಪಕ್ಷ ಕಾಂಗ್ರೆಸ್ 40% ಕಮೀಷನ್ ಆರೋಪವನ್ನೇ ಚುನಾವಣಾ ಸಂದರ್ಭದಲ್ಲಿ ಪ್ರಮುಖ ಅಸ್ತ್ರ ಮಾಡಿಕೊಂಡಿತ್ತು. ಮಾಜಿ ಸಚಿವ ಮುನಿರತ್ನ ಅವರು ಇಂದು ಐಟಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಅಂಬಿಕಾಪತಿ ವಿರುದ್ಧ ಕಾವಲ್‍ಬೈರಸಂದ್ರ ಠಾಣೆಗೆ ದೂರು ನೀಡಿದ್ದರು.
ಇದೀಗ 42 ಕೋಟಿ ನಗದು ಸಮೇತ ಐಟಿ ಖೆಡ್ಡಾದಲ್ಲಿ ಬಿದ್ದಿರುವ ಅಂಬಿಕಾಪತಿ ಕುಟುಂಬಕ್ಕೆ ಬರುವ ದಿನಗಳಲ್ಲಿ ಕಾನೂನಿನ ಸಂಕಷ್ಟಗಳು ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.