ಬೆಂಗಳೂರು,ಮೇ.15- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹದಿನೈದು ಸಾವಿರ ಕೋಟಿಗೂ ಅಧಿಕ ಮೌಲ್ಯದ 7 ಬಿಡಿಎ ಸಂಕೀರ್ಣಗಳನ್ನು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ತಮ ಆಪ್ತ ರಾಜಕಾರಣಿಗಳ ಪಾಲುದಾರಿಕೆ ಸಂಸ್ಥೆಗಳಿಗೆ ಗುತ್ತಿಗೆ ಹೆಸರಿನಲ್ಲಿ ಶಾಶ್ವತ ಉಡುಗೊರೆ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
2017-18 ರ ಸಾಲಿನಲ್ಲಿ ಸಿದ್ಧರಾಮಯ್ಯ ನವರು ಮುಖ್ಯಮಂತ್ರಿಗಳಾಗಿದ್ದ ಅಧಿಕಾರವಧಿಯ ಅಂತಿಮ ಹಂತದಲ್ಲಿ ಬೆಂಗಳೂರು ಮಹಾನಗರದ ಹದಯ ಭಾಗದ ಪ್ರದೇಶಗಳಾದ ಇಂದಿರಾನಗರ, ಕೋರಮಂಗಲ, ಹೆಚ್‌ಎಸ್‌ಆರ್ ಬಡಾವಣೆ, ಸದಾಶಿವನಗರ, ಆರ್.ಟಿ. ನಗರ, ಕಾಕ್ಸ್ ಟೌನ್ ಮತ್ತು ಚಂದ್ರಾ ಲೇಔಟ್ ಗಳಲ್ಲಿರುವ 7 ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಅವರ ಅತ್ಯಂತ ಆಪ್ತ ವಲಯದಲ್ಲಿರುವ ಸಚಿವ ಕೆ. ಜೆ. ಜಾರ್ಜ್ ರವರ ಪಾಲುದಾರಿಕೆಯ ಎಂಬೆಸಿ ಸಂಸ್ಥೆ ಮತ್ತು ಮೆವರಿಕ್ ಹೋಲ್ಡಿಂಗ್‌್ಸ ಸಂಸ್ಥೆಗೆ 65 ವರ್ಷಗಳ ಗುತ್ತಿಗೆಗೆ ನೀಡುವಂತಹ ಜನ ವಿರೋಧಿ ಕಾರ್ಯ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತಂತೆ 2019 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರಿಗೆ ನಾನು ದಾಖಲೆಗಳ ಸಹಿತ ಪತ್ರ ಮುಖೇನ ಈ ಕಾನೂನು ಬಾಹಿರ ಕಾರ್ಯದ ಬಗ್ಗೆ ತಿಳಿಸಿದ ನಂತರ ಅವರು ಈ ಕಾನೂನು ಬಾಹಿರ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶಿಸಿದ್ದರು.
ಆದರೆ, ಇದೀಗ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ಅವರು ಇದೀಗ ಮತ್ತೆ ಏಳು ಬಿಡಿಎ ಸಂಕೀರ್ಣಗಳ ಮರುನಿರ್ಮಾಣದ ಹೆಸರಿನಲ್ಲಿ ಎಂಬೆಸ್ಸಿ ಹಾಗೂ ಮೆವರಿಕ್ ಸಂಸ್ಥೆಗಳಿಗೆ 65 ವರ್ಷಗಳ ಗುತ್ತಿಗೆ ನೀಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಂದಿರಾನಗರ ವಾಣಿಜ್ಯ ಸಂಕೀರ್ಣವು ಪ್ರಸ್ತುತ ಸುಮಾರು 7,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಇನ್ನುಳಿದ 6 ವಾಣಿಜ್ಯ ಸಂಕೀರ್ಣಗಳು ಸುಮಾರು 8,000 ದಿಂದ 9,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯವನ್ನು ಹೊಂದಿರುತ್ತವೆ.
15,000 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ ಈ 7 ಅತ್ಯಮೂಲ್ಯ ಸರ್ಕಾರಿ ಸ್ವತ್ತುಗಳನ್ನು ಸಂರಕ್ಷಿಸಿಕೊಳ್ಳಬೇಕಿರುವ ರಾಜ್ಯ ಸರ್ಕಾರವೇ ಪ್ರಭಾವಿ ವ್ಯಕ್ತಿಗಳ ಪಾಲುದಾರಿಕೆಯ ಸಂಸ್ಥೆಗಳಿಗೆ 35 ವರ್ಷಗಳ ನೇರ ಗುತ್ತಿಗೆ ಮತ್ತು 30 ವರ್ಷಗಳ ವಿಸ್ತರಿಸಬಹುದಾದ ಗುತ್ತಿಗೆ ಅಂದರೆ 65 ವರ್ಷಗಳ ಗುತ್ತಿಗೆಗೆ ನೀಡುವ ಮೂಲಕ ಇಂತಹ ಅಮೂಲ್ಯ ಸರ್ಕಾರಿ ಸ್ವತ್ತುಗಳು ಶಾಶ್ವತವಾಗಿ ನಮಿಂದ ದೂರ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ರಮೇಶ್ ದೂರಿದ್ದಾರೆ.
ಸಿದ್ಧರಾಮಯ್ಯ ನವರ ಈ ಜನ ವಿರೋಧಿ ಕಾರ್ಯದ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುತ್ತಿದೆ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನೂ ಸಹ ದಾಖಲಿಸಲಾಗುತ್ತಿದೆ ಎಂಬ ವಿಷಯವನ್ನು ಪತ್ರದ ಮೂಲಕ ಸಿದ್ಧರಾಮಯ್ಯನವರ ಗಮನಕ್ಕೆ ತರಲಾಗಿದೆ ಎಂದು ರಮೇಶ್ ಸುದ್ದಿಗಾರರಿಗೆ ತಿಳಿಸಿದರು.